ಮಡಿಕೇರಿ ಜು.25 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಮೆದುಳು ದಿನವನ್ನು ಆಚರಿಸಲಾಯಿತು.
“ಮೆದುಳು ಆರೋಗ್ಯ ಹಾಗೂ ತಡೆಗಟ್ಟುವಿಕೆ” ಘೋಷ ವಾಕ್ಯದೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾನ್ಯ ಮೆದುಳಿನ ಕಾಯಿಲೆಗಳ ಗುರುತಿಸುವಿಕೆ, ತಲೆ ನೋವು, ಮೂರ್ಛೆ ರೋಗ, ಪಾರ್ಶ್ವಾವಾಯು, ಮರೆವಿನ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್ ಕುಮಾರ್, ಪ್ರಸ್ತುತ ಮಾನವನ ಆರೋಗ್ಯಕ್ಕೆ ಮೆದುಳಿನ ಆರೋಗ್ಯವು ಎಷ್ಟು ಪ್ರಮುಖವಾಗಿ ಬೇಕಾಗಿದೆ ಹಾಗೂ ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಏನು ಮಾಡಬೇಕು ಎಂದು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ಭಾರತದಲ್ಲಿ ನರವೈಜ್ಞಾನಿಕ ಕಾಯಿಲೆಗಳ ಹೊರೆ ಹೆಚ್ಚುತ್ತಿದೆ. ಪಾರ್ಶ್ವವಾಯು, ಬುದ್ಧಿಮಾಂದ್ಯತೆಗಳು, ರೋಗದ ಹೊರೆ ಮತ್ತು ಮರಣಕ್ಕೆ ಪ್ರಮುಖ ಕೊಡುಗೆಗಳಾಗಿವೆ. ಅಪಸ್ಮಾರ, ತಲೆನೋವು, ಸೋಂಕುಗಳು, ತಲೆಗೆ ಗಾಯಗಳು ಮತ್ತು ಇತರ ನರವೈಜ್ಞಾನಿಕ ಅಸ್ವಸ್ಥತೆಗಳು ಸಹ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದ್ದು ಇದರ ತುರ್ತು ಕ್ರಮದ ಅಗತ್ಯತೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಾದ್ಯಂತ ಬ್ರೈನ್ ಹೆಲ್ತ್ ಕ್ಲಿನಿಕ್ಗಳನ್ನು ಪ್ರಾರಂಭಿಸಲಾಗಿರುವ ಬಗ್ಗೆ ತಿಳಿಸಿದರು.
KaBHI ಜಿಲ್ಲಾ ಸಂಯೋಜಕರಾದ ಆರ್.ವಿಕ್ರಮ್ ಮಾತನಾಡಿ, ನರಸಂಬಂಧಿ ರೋಗಗಳ ಬಗ್ಗೆ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ರೂಪುರೇಷೆಗಳ ಬಗ್ಗೆ ಅರಿವು ಮೂಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗ ರಚನಾ ಶಾಸ್ತ್ರ ವಿಭಾಗದಿಂದ ಮೆದುಳಿನ ಮಾದರಿಗಳನ್ನು ಆಸ್ಪತ್ರೆಯಲ್ಲಿ ಪ್ರದರ್ಶಿಸಿ ಅಗತ್ಯ ಮಾಹಿತಿಯನ್ನು ಡಾ.ರೋಶಿನಿ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಮುಖ್ಯ ಆಡಳಿತಾಧಿಕಾರಿ ರೋಹಿಣಿ, ವೈದ್ಯಶಾಸ್ತ್ರ ವಿಭಾಗದ ಪ್ರಾದ್ಯಾಪಕಾರ ಡಾ. ಎ.ಜೆ.ಲೋಕೇಶ್ ಸೇರಿದಂತೆ ವೈದ್ಯರು, ಬೋಧಕೇತರ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.