ಮಡಿಕೇರಿ ಜು.25 NEWS DESK : ಪರಿಶಿಷ್ಟ ಜಾತಿ ಪಂಗಡದ ಸಮುದಾಯಕ್ಕೆ ಸಮಾನ ಅವಕಾಶ ಕಲ್ಪಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುವುದಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಅವರು ನೇಮಕಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಎಸ್.ಸಿ ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಿಶಿಷ್ಟ ಜಾತಿ ಪಂಗಡದವರನ್ನು ಪಂಚಾಯಿತಿನಿ0ದ ಪಾರ್ಲಿಮೆಂಟ್ ವರೆಗೂ ಅಧಿಕಾರ ನೀಡಿ ಸಹಕರಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಉಳಿದ ಪಕ್ಷಗಳು ದಲಿತರನ್ನು ಮತ ಬ್ಯಾಂಕ್ ಗಳನ್ನಾಗಿ ಬಳಸಿಕೊಂಡು ನಾಟಕ ಮಾಡುವುದರಲ್ಲಿ ಕಾಲ ಕಳೆಯುತ್ತಿವೆ ಎಚಿದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿಯ ಸ್ಥಾನಮಾನ, ಸಂಪುಟದಲ್ಲಿ ಅವಕಾಶ, ಈ ಹಿಂದೆ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಅನೇಕ ಉನ್ನತ ಸ್ಥಾನಮಾನಗಳು ಪರಿಶಿಷ್ಟರಿಗೆ ಸಿಕ್ಕಿದೆ. ಡಾ.ಅಂಬೇಡ್ಕರ್ ಅವರ ಆಶಯದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ಸಾಮಾಜಿಕ ನ್ಯಾಯದಡಿ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವ ದೃಷ್ಟಿಯಿಂದ ದಲಿತರ ಮತ ಪಡೆದು ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಪರಿಶಿಷ್ಟ ಜಾತಿ, ಪಂಗಡದ ಸಾವಿರಾರು ಕೋಟಿ ರೂ.ಗಳನ್ನು ದುರುಪಯೋಗ ಮಾಡಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭ ರಾಜ್ಯದಾದ್ಯಂತ ಚೊಂಬು ಪ್ರದರ್ಶನ ಮಾಡಿದ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನವನ್ನು ದುರುಪಯೋಗ ಮಾಡುತ್ತೇವೆ ಎನ್ನುವ ಮುನ್ಸೂಚನೆಯ ಸಂಕೇತದ ಪ್ರದರ್ಶನವೇ ಎನ್ನುವ ಸಂಶಯ ವ್ಯಕ್ತವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡಕ್ಕೆ ಯಾವುದೇ ರೀತಿಯಲ್ಲಿ ಲೋಪವೆಸಗದೆ ನ್ಯಾಯ ಸಮ್ಮತ ಅವಕಾಶ ಕಲ್ಪಿಸಿರುವ ಭಾರತೀಯ ಜನತಾ ಪಾರ್ಟಿ ದಲಿತರ ಪರ ಇದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪಿ.ಎಂ.ರವಿ ಮೊಗೇರ ತಿಳಿಸಿದ್ದಾರೆ.