ಸೋಮವಾರಪೇಟೆ ಜು.25 NEWS DESK : ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು, ತಾಕೇರಿ, ತಲ್ತಾರೆಶೆಟ್ಟಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ತಕ್ಷಣ ವಿದ್ಯುತ್ ಮಾರ್ಗವನ್ನು ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೆಸ್ಕ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಕಿರಗಂದೂರು ಗ್ರಾಮದಲ್ಲಿ 10 ಕಂಬಗಳು ನೆಲಕ್ಕುರುಳಿದ್ದು ಕಳೆದ 20 ದಿನಗಳಿಂದ ವಿದ್ಯುತ್ ಇಲ್ಲ ಎಂದು ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದರು. ತಾಕೇರಿ ಗ್ರಾಮದ 40 ಮನೆಗಳಿಗೆ ಒಂದು ವಾರದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಕೂಡಲೆ ವಿದ್ಯುತ್ ಮಾರ್ಗ ಸರಿಪಡಿಸಬೇಕು ಎಂದು ತಾಕೇರಿ ಪೊನ್ನಪ್ಪ ಆಗ್ರಹಿಸಿದರು. ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಸೆಸ್ಕ್ ಸಿಬಂದಿಗಳು ಶಕ್ತಿಮೀರಿ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. 3-4 ದಿನಗಳಲ್ಲಿ ಮಾರ್ಗ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಎಇಇ ರವಿಕುಮಾರ್ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿಯಲಾಯಿತು. ಈ ಸಂದರ್ಭ ಗ್ರಾಮಸ್ಥರಾದ ಶಿವಕುಮಾರ್, ಈರಪ್ಪ, ಜೀವನ್, ಸಂದೀಪ್, ಬಿ.ಪಿ.ಅನಿಲ್, ಸುರೇಶ್, ಬಿ.ಎಸ್.ನಾಗೇಶ್, ಸೋಮಯ್ಯ ಮತ್ತಿತರರು ಇದ್ದರು.