ಸೋಮವಾರಪೇಟೆ NEWS DESK ಜು.28 : ಮಳೆಯಿಂದಾಗಿ ಹಾನಿ ಸಂಭವಿಸಿದ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರೀ ಮಳೆಯಿಂದಾಗಿ ಮನೆ ಕುಸಿತಗೊಂಡಿರುವ ತೋಳೂರುಶೆಟ್ಟಳ್ಳಿಯ ಟಿ.ಲಕ್ಷ್ಮಮ್ಮ ಊರೊಳಗಿನಕೊಪ್ಪದ ಕೆ.ಜೆ. ನವೀನ್, ವನಗೂರುಕೊಪ್ಪದ ವಿ.ಕೆ. ಇಂದಿರಾ, ಜಾನಕಿ ಅವರುಗಳ ಮನೆಗಳನ್ನು ಶಾಸಕರು ವೀಕ್ಷಿಸಿದರು. ಇದರೊಂದಿಗೆ ಯಡೂರು ಗ್ರಾಮದಲ್ಲಿ ಸುಮಾರು ಮುಕ್ಕಾಲು ಏಕರೆ ತೋಟ ಕುಸಿದು, ಅಪಾಯದ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿ, ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಬರೆ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿರುವುದನ್ನು ಪರಿಶೀಲಿಸಿದ ಸುಜಾ ಕುಶಾಲಪ್ಪ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿಸಿದರು. ಬೆಟ್ಟದಳ್ಳಿ ಭಾಗದಲ್ಲಿ ಉಂಟಾಗಿರುವ ಕೃಷಿ ಹಾನಿಯ ಬಗ್ಗೆ ಸ್ಥಳೀಯ ಗ್ರಾ.ಪಂ. ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಹೊಸಬೀಡು ಗ್ರಾಮದಲ್ಲಿ ಲೋಕೋಪಯೋಗಿ ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಕುಸಿದು ಹಾನಿಯಾಗಿರುವುದನ್ನು ಪರಿಶೀಲಿಸಿದರು. ಮನೆ ಹಾನಿಯಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಾಂತ್ವಾನ ಹೇಳಿ, ಶೀಘ್ರವಾಗಿ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರು, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ಆಗಿರುವ ಮನೆಗಳ ಹಾನಿ ಬಗ್ಗೆ ಕಂದಾಯ ನಿರೀಕ್ಷಕ ದಾಮೋಧರ್, ಗ್ರಾಮ ಆಡಳಿತಾಧಿಕಾರಿ ತಳವಾರ್ ಕರಿಬಸವರಾಜು ಅವರುಗಳೊಂದಿಗೆ ಮಾಹಿತಿ ಸಂಗ್ರಹಿಸಿದರು. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ದಿನಗಳಲ್ಲಿ ದುಪ್ಪಟ್ಟು ಮಳೆಯಾಗಿದೆ. ಭಾರೀ ಪ್ರಮಾಣದ ಹಾನಿಯೂ ಸಂಭವಿಸಿದೆ. ಕಾಫಿ, ಕರಿಮೆಣಸು ಬೆಳೆ ನಷ್ಟಗಳಿಗೆ ಕೇಂದ್ರ ಸರ್ಕಾರದಿಂದಲೂ ಪರಿಹಾರ ಒದಗಿಸಲು ಸಂಸದರೊಂದಿಗೆ ಮಾತುಕತೆ ನಡೆಸಿ, ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ರಸ್ತೆಗಳೂ ದುಸ್ಥಿತಿಗೆ ತಲುಪಿವೆ. ಕೊಡಗಿಗೆ ನಷ್ಟವಾದರೂ ಇತರ ಭಾಗಗಳಿಗೆ ನೀರು ಒದಗಿದೆ. ಹಾಗಾಗಿ ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸ್ಥಳೀಯ ಶಾಸಕರುಗಳು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಮುಖ್ಯಮಂತ್ರಿಗಳೂ ಸಹ ಕೊಡಗಿನ ಸಮಸ್ಯೆಗೆ ಸ್ಪಂದಿಸಬೇಕು ಎಂದರು. ಈ ಸಂದರ್ಭ ಪ್ರಮುಖರಾದ ಹರಗ ಉದಯ, ಹುಲ್ಲೂರಿಕೊಪ್ಪ ಚಂದ್ರು, ಕೆ.ಕೆ. ಸುಧಾಕರ್, ಉಮೇಶ್, ಶಿವಕುಮಾರ್, ಮದನ್, ಬೆಟ್ಟದಳ್ಳಿ ಸಂಪತ್, ಗ್ರಾ.ಪಂ. ಸಿಬ್ಬಂದಿ ಗಂಧರ್ವ, ಸುಧಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.