ಮಡಿಕೇರಿ ಜು.29 NEWS DESK : ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 15 ನಿರ್ದೇಶಕ ಸ್ಥಾನದ ಆಯ್ಕೆಗೆ ಆ.18 ರಂದು ಚುನಾವಣೆ ನಡೆಯಲಿದೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಸಂಜಯ ಪಿ.ಕುರಳುಪ್ಪೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಮುಖ್ಯ ಪ್ರವರ್ತಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ 9, ಹಿಂದುಳಿದ ಪ್ರವರ್ಗ ಎ ಕ್ಷೇತ್ರದಿಂದ 2, ಮಹಿಳಾ ಕ್ಷೇತ್ರದಿಂದ 2, ಪರಿಶಿಷ್ಟ ಜಾತಿ ಕ್ಷೇತ್ರದಿಂದ 1, ಪರಿಶಿಷ್ಟ ಪಂಗಡ ಕ್ಷೇತ್ರದಿಂದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಆ.4 ರಿಂದ 10 ರವರೆಗೆ ನಾಮಪತ್ರ ಸಲ್ಲಿಸಬಹುದು. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಸಹಕಾರಿ ನಿಯಮಿತ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ.
ಆ.11 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆಯ ನಂತರ ಸಂಘದ ನೋಟೀಸ್ ಬೋರ್ಡ್ ನಲ್ಲಿ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಆ.12 ರಂದು ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ಹಿಂಪಡೆದುಕೊಳ್ಳಬಹುದು. ಮಧ್ಯಾಹ್ನ 3 ಗಂಟೆಯ ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಅರ್ಹ ಉಮೇದುವಾರರ ಪಟ್ಟಿ ಪ್ರಕಟಣೆ ನಂತರ ಉಮೇದುವಾರರಿಗೆ ಚಿಹ್ನೆ ಹಂಚಲಾಗುತ್ತದೆ. 13 ರಂದು 3 ಗಂಟೆಗೆ ಉಮೇದುವಾರರ ಪಟ್ಟಿಯನ್ನು ಚಿಹ್ನೆ ಸಹಿತ ಪ್ರಕಟಿಸಲಾಗುತ್ತದೆ.
ಆ.18 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸಭಾಂಗಣದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆ ನಡೆಯಲಿದೆ.