ಸೋಮವಾರಪೇಟೆ NEWS DESK ಜು.31 : ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ಕಾರ್ಯಕಾರಿಣಿ ಸಭೆ ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಮಂಡಲ ಅಧ್ಯಕ್ಷ ಗೌತಮ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜೀ ಸಂಸದ ಪ್ರತಾಪ್ ಸಿಂಹ, ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳ ಮೂಲಕ ಯಾರಿಗೂ ಹಣ ಬರುತ್ತಿಲ್ಲ. ಈ ಗ್ಯಾರಂಟಿಗಳು ಕಾಂಗ್ರೆಸ್ ಎಲೆಕ್ಷನ್ಗಾಗಿ ಮಾಡಿದ ಗಿಮಿಕ್ ಎಂಬುದು ಜನರಿಗೆ ಮನದಟ್ಟಾಗಿದೆ. ಮಳೆಯಿಂದ ಹಾನಿಯಾದರೆ ಬಿಜೆಪಿ ಸರ್ಕಾರ ಲಕ್ಷ ಪರಿಹಾರ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಬಿಡಿಗಾಸೂ ನೀಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮ ಸೇರಿದಂತೆ ಮೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ. ಎಸ್ಸಿ ಎಸ್ಟಿ ಮೀಸಲು ಅನುದಾನವನ್ನು ಬೇರೆಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಈ ಬಗ್ಗೆ ಜನರಿಗೆ ತಿಳಿಸಬೇಕು. ಭ್ರಷ್ಟತೆಯನ್ನು ಪ್ರಶ್ನಿಸುವ, ಪರಿಣಾಮಕಾರಿಯಾಗಿ ಹೋರಾಟ ರೂಪಿಸುವ ಅಗತ್ಯವಿದ್ದು, ಯುವ ನಾಯಕರು ಹೋರಾಟಕ್ಕೆ ಇಳಿಯಬೇಕು. ಆ ಮೂಲಕ 2028ರ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಿಂದ ಯುವ ನಾಯಕರು ಶಾಸಕರುಗಳಾಗಿ ಆಯ್ಕೆಯಾಗಬೇಕು ಎಂದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರದಿಂದ ಕನಿಷ್ಟ 50 ಸಾವಿರದಿಂದ ಗರಿಷ್ಠ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಪ್ರಳಯದಿಂದ ಮನೆ ಕಳೆದುಕೊಂಡವರಿಗೆ ನಿವೇಶನ ಕಲ್ಪಿಸಿ 10 ಲಕ್ಷ ವೆಚ್ಚದಲ್ಲಿ ಮನೆಯನ್ನೂ ನಿರ್ಮಿಸಿಕೊಡಲಾಗಿತ್ತು. ಆದರೆ ಕಾಂಗ್ರೆಸ್ ಬಂದ ನಂತರ ಮಳೆಯಿಂದ ಮನೆಗಳಿಗೆ ಹಾನಿಯಾದರೆ ಪರಿಹಾರವನ್ನು 6 ಸಾವಿರದಿಂದ ಗರಿಷ್ಠ 1.20 ಲಕ್ಷಕ್ಕೆ ಇಳಿಸಿದೆ. ಇಂತಹ ಜನವಿರೋಧಿ ಸರ್ಕಾರ ಈವರೆಗೆ ಬಂದಿರಲಿಲ್ಲ ಎಂದು ಆರೋಪಿಸಿದರು.
ಮಡಿಕೇರಿಯಲ್ಲಿ 450 ಬೆಡ್ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ಬಿಜೆಪಿ ಸರ್ಕಾರ ನಿರ್ಮಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೊಡಗಿಗೆ ನಯಾಪೈಸೆಯನ್ನೂ ನೀಡಿಲ್ಲ ಎಂದು ಟೀಕಿಸಿದರು. ಮಾಜೀ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್ ಕಮಿಷನ್ ಸರ್ಕಾರ, ಪೇ ಸಿ.ಎಂ. ಎಂದು ಸುಳ್ಳು ಹೇಳಿದ್ದನ್ನು ಜನರು ನಂಬಿ ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಆರಂಭದಿಂದ ಇಲ್ಲಿಯವರೆಗೂ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಇದಕ್ಕೆ ವಾಲ್ಮೀಕಿ ನಿಗಮ ಹಾಗೂ ಮೂಡಾ ನಿವೇಶನ ಹಗರಣಗಳೇ ಸಾಕ್ಷಿಯಾಗಿದೆ ಎಂದರು. ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಡಗು ವಿರೋಧಿ ಸುತ್ತೋಲೆಗಳನ್ನು ಹೊರಡಿಸಿದೆ. ಸಿ ಮತ್ತು ಡಿ ಜಾಗವನ್ನು ಅರಣ್ಯ ಮಾಡುವುದು, ವನ್ಯಪ್ರಾಣಿಗಳ ಕೊಂಬು ಹಿಂತಿರುಗಿಸುವುದು, ತೋಟದಲ್ಲಿರುವ ಮರಗಳ ಸರ್ವೆ ಕಾರ್ಯದ ಬಗ್ಗೆ ಪ್ರತಿ ಗ್ರಾಮ ಸಭೆಯಲ್ಲೂ ಚರ್ಚೆ ನಡೆಸಿ, ಸುತ್ತೋಲೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ಸೋಲಾಗಿದ್ದರೂ ನಂತರದ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಬಲಗೊಂಡಿದೆ. ಎಂಎಲ್ಸಿ, ಎಂ.ಪಿ. ಸೇರಿದಂತೆ ಸಹಕಾರಿ ಸಂಘದ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪಕ್ಷದ ಮಾಜೀ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಬಿಜೆಪಿ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಅಭಿಮನ್ಯುಕುಮಾರ್,ಶುಶ್ರೂತ್ ಗೌಡ, ಮನುಕುಮಾರ್ ರೈ, ಮಚ್ಚಂಡ ಪ್ರಕಾಶ್, ಕವಿತಾ ವಿರೂಪಾಕ್ಷ, ಮಹೇಶ್ ತಿಮ್ಮಯ್ಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.