ಸುಂಟಿಕೊಪ್ಪ ಜು.31 NEWS DESK : ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಸುಂಟಿಕೊಪ್ಪದ ಹೊಸಬಡಾವಣೆಯಲ್ಲಿ ನಡೆದಿದೆ. ಹೊಸಬಡಾವಣೆ ನಿವಾಸಿ ಮನು ಅಚ್ಚಮಯ್ಯ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಮನೆಯ ಬೀಗವನ್ನು ಮುರಿದು ಒಳನುಗ್ಗಿ ಮನೆಯಲ್ಲಿದ್ದ 3 ಕಪಾಟುಗಳನ್ನು ಜಾಲಾಡಿ 1 ಲಕ್ಷದ 75 ಸಾವಿರ ಮೌಲ್ಯದ 3 ಪೌನ್ ಚಿನ್ನ ಹಾಗೂ ರೂ.6 ಸಾವಿರ ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ಪತ್ತೆದಳದ ಅಧಿಕಾರಿ ಸ್ವಾಮಿ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಅಪರಾಧ ವಿಭಾಗದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.










