ಮಡಿಕೇರಿ NEWS DESK ಆ.1 : ಕೊಡಗಿನ ಪರಿಸರಕ್ಕೆ ಪೂರಕವಾದ ಮತ್ತು ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ವಸ್ತುಗಳನ್ನು ಬಳಸಿ ಉದ್ದಿಮೆಗಳ ಆರಂಭಕ್ಕೆ ಯುವ ಸಮೂಹಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೊಡಗು ಹಿಂದು ಎಕನಾಮಿಕ್ ಫೋರಂ ಹಾಗೂ ಲಘು ಉದ್ಯೋಗ ಭಾರತಿ ಸಂಸ್ಥೆಯ ಮೈಸೂರು ವಿಭಾಗದ ವತಿಯಿಂದ ಆ.3 ರಂದು ಗೋಣಿಕೊಪ್ಪಲಿನಲ್ಲಿ ವಿಶೇಷ ಕಾರ್ಯಾಗಾರ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಹಿಂದು ಎಕನಾಮಿಕ್ ಫೋರಂನ ಕಾರ್ಯಾಧ್ಯಕ್ಷ ಟಿ.ಕೆ.ಸುಧೀರ್ ಈ ಕುರಿತು ಮಾಹಿತಿ ನೀಡಿ, ಅಂದು ಗೋಣಿಕೊಪ್ಪಲಿನ ಪರಿಮಳ ಮಂಗಳ ವಿಹಾರದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಯುವ ಉದ್ಯಮಿಗಳಿಗೆ ಕಾರ್ಯಾಗಾರದ ಮೂಲಕ ಉದ್ದಿಮೆಗಳ ಕುರಿತು ಅಗತ್ಯ ಮಾಹಿತಿಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಸಿಎಸ್‌ಐಆರ್ ಮತ್ತು ಸಿಎಫ್‌ಟಿಆರ್‌ಐನ ಮುಖ್ಯ ವಿಜ್ಞಾನಿಗಳಾದ ಡಾ.ಪುಷ್ಪ ಎಸ್. ಮೂರ್ತಿ ಅವರು ಕೃಷಿ ಉತ್ಪನ್ನಗಳು, ಸಾಂಬಾರ ಪದಾರ್ಥ ಮತ್ತು ಪರಿಮಳ ತಂತ್ರಜ್ಞಾನಗಳ ಕುರಿತು ಮಾಹಿತಿ ಒದಗಿಸಲಿದ್ದಾರೆ. ಸಿಎಸ್‌ಐಆರ್ ಮತ್ತು ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ. ನೇಗಿ ಪಿ.ಎಸ್. ಅವರು, ಹಣ್ಣು ಮತ್ತು ಹಂಪಲು ತಂತ್ರಜ್ಞಾನದ ಬಗ್ಗೆ ವಿವರಗಳನ್ನ ಒದಗಿಸಲಿದ್ದಾರೆ ಎಂದರು. ಕೊಡಗು ವಿವಿಯ ಉಪ ಕುಲಪತಿಗಳಾದ ಡಾ. ಅಶೋಕ್ ಆಲೂರು ಅವರು ಕೃಷಿ ಮತ್ತು ಆಹಾರ ವಭಾಗದ ವಿಶೇಷ ತಜ್ಞರಾಗಿದ್ದು, ಇದರ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ. ಖಾದಿ ಗ್ರಾಮೋದ್ಯೋಗ ಮಂಡಳಿಯ ಸಿಇಒ ಹೆಚ್.ಆರ್. ರಾಜಪ್ಪ ಅವರು ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ ಹಾಗೂ ಎಸ್‌ಐಡಿಬಿಐನ ಡಿಜಿಎಂ ಸುಬ್ಬ ರಾವ್ ಶ್ರೀಪತಿ ಅವರು ಎಂಎಸ್‌ಎಂಇ ಬಗ್ಗೆ ವಿವರಗಳನ್ನು ಒದಗಿಸಲಿದ್ದಾರೆ. ಕಾರ್ಯಾಗಾರದಲ್ಲಿ ಸಂಸದ ಯದುವೀರ್, ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಕೊಡಗು ಹಿಂದು ಎಕನಾಮಿಕ್ ಫೋರಂನ ಅಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಯುವ ಉತ್ಸಾಹಿ ಯುವ ಉದ್ಯಮಿಗಳನ್ನು ಒಂದೇ ವೇದಿಕೆಯಡಿ ತರುವ ಮೂಲಕ, ಅವರಿಗೆ ಸ್ಥಳೀಯವಾಗಿ ಆರಂಭಿಸಬಹುದಾದ ಉದ್ದಿಮೆಗಳ ಬಗ್ಗೆ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶವೆಂದು ತಿಳಸಿದರು.