ಮಡಿಕೇರಿ ಆ.2 NEWS DESK : ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದೆ. ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಅಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ 1991 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನೆಸೆಫ್, ಡಬ್ಲ್ಯು ಬಿ ಡಬ್ಲ್ಯು ಸಹಯೋಗದಲ್ಲಿ ಆರಂಭಿಸಲಾಯಿತು. ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ಸಪ್ತಾಹದೊಂದಿಗೆ ಈ ಕುರಿತು ತಾಯಂದಿರಿಗೆ ಹೆಚ್ಚಿನ ಅರಿವು ಮೂಡಿಸುವ ಜಾಗೃತಿ ಕಾರ್ಯ 120 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತಿದೆ.
ಇತ್ತೀಚಿನ ಆಧುನಿಕ ಯುಗದಲ್ಲಿ ಮಹಿಳೆಯರಲ್ಲಿ ತಪ್ಪು ಕಲ್ಪನೆಗಳಿಂದ, ಉದ್ಯೋಗಸ್ಥ ಮಹಿಳೆಯರಿಗೆ ಸಮಯದ ಅಭಾವದಿಂದಲೋ ಅಥವಾ ತಪ್ಪು ತಿಳುವಳಿಕೆಯಿಂದ ಆದಷ್ಟು ಬೇಗ ಮಗುವಿಗೆ ಎದೆ ಹಾಲು ಬಿಡಿಸಿ ಬಾಟಲಿ ಹಾಲನ್ನು ನೀಡಲು ಮುಂದಾಗುತ್ತಿರುವುದು ವಿಷದಾನಿಯ.
ಜೀವನ ಮಟ್ಟ ಕಡಿಮೆ ಇರುವ, ಶಿಕ್ಷಣ ಮಟ್ಟ ಕಡಿಮೆ ಇರುವುದು, ಎದೆಹಾಲು ಕೊಡುವ ಬಗ್ಗೆ ಶುಚಿತ್ವಕ್ಕೆ ಗಮನಹರಿಸದೆ ಇರುವ ಕುಟುಂಬಗಳಲ್ಲಿ ಮತ್ತು ಮೂಢನಂಬಿಕೆಗಳ ಕಾರಣದಿಂದ ಮಗುವು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ.
“ಈ ಬಾರಿಯ ಘೋಷವಾಕ್ಯ;-ಕೊರತೆಗಳನ್ನು ಕೊನೆಗೊಳಿಸಿ, ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ” ಎಂಬುವುದಾಗಿದ್ದು ಪ್ರತಿಯೊಂದು ಮಗುವಿಗೂ ಎದೆಹಾಲು ನೀಡುವ ಪ್ರಜ್ಞಾವಂತಿಕೆ ತಾಯಂದಿರಲ್ಲಿ ಬರಬೇಕಾಗಿದೆ. ಪ್ರತಿ ಗರ್ಭಿಣಿಯರಿಗೆ ಕಿವಿಮಾತು ಮಗು ಹುಟ್ಟಿದ ತಕ್ಷಣವೇ ಎದೆಹಾಲನ್ನು ಕುಡಿಸುವುದರಿಂದ ಗಿಣ್ಣುಹಾಲಿನಲ್ಲಿ ಹಳದಿ ಬಣ್ಣದ ಕೊಲಸ್ಟ್ರಮ್ ಎಂಬ ಆಂಶವಿದ್ದು ಪ್ರತಿಸಲ ಮಗುವಿಗೆ ಶಕ್ತಿ ನೀಡುವ ಜೊತೆಗೆ ಬಾಯಿತುಂಬಾ ಉಪಕಾರಕವಾದ ಬ್ಯಾಕ್ಟೀರಿಯಾಗಳನ್ನು ಕೂಡ ಮಗುವಿಗೆ ಕೊಡುಗೆಯಾಗಿ ನೀಡುತ್ತದೆ. ಅಷ್ಟೇ ಅಲ್ಲ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಾಗಲು ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಸಿಯಂ, ವಿಟಮಿನ್ ಎ, ಕೊಬ್ಬು, ಸಕ್ಕರೆ, ನೀರು, ಮತ್ತು ಪ್ರೋಟೀನ್ ಸಮತೋಲನ ಹೊಂದಲು ಕಾರಣವಾಗುತ್ತದೆ. ಎದೆಹಾಲು ಹಾರ್ಮೋನು, ಬೆಳವಣಿಗೆಯ ಅಂಶಗಳು ಮತ್ತು ಪ್ರತಿರಕ್ಷಾ ವಸ್ತುಗಳನ್ನು ಶಿಶುಗಳಿಗೆ ಉಸಿರಾಟದ, ಕಿವಿ ಮತ್ತು ಮೂತ್ರದ ಸೋಂಕು, ಅತಿಸಾರ, ಮಲಬದ್ದತೆ ಮತ್ತು ಜಠರಗರುಳಿನ ಸಮಸ್ಯೆಗಳು ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ರಕ್ಷಿಸಲು ಸ್ತನ್ಯಪಾನವು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ.
ಎದೆಹಾಲು ಕುಡಿಯುವುದರಿಂದ ಮಗುವಿಗೆ ರೋಗನಿರೋಧಕ ಶಕ್ತಿ ವೃದ್ದಿಸುತ್ತದೆ, ಮಗುವಿನ ಬಾಯಾರಿಕೆ ತಣಿಯುತ್ತದೆ, ಮಗುವಿನ ಮೆದುಳು, ಕಣ್ಣು ಮತ್ತು ಶರೀರದ ಉತ್ತಮ ಬೆಳವಣಿಗೆಗೆ ತಾಯಿ ಹಾಲು ಉತ್ತಮವಾಗಿದೆ. ಎದೆಹಾಲಿನಲ್ಲಿ ಪೋಷಕಾಂಶಗಳು ಸಮೃದ್ದವಾಗಿದ್ದು ಮಗುವಿನ ಬೆಳವಣಿಗೆಗೆ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಗುವಿನ ಶರೀರದ ತೂಕವನ್ನು ಸಮತೋಲನದಲ್ಲಿಡಲು ಮತ್ತು ಮಗುವಿನ ದವಡೆ ಬೆಳವಣಿಗೆಗೆ ತಾಯಿಹಾಲು ಉತ್ತಮ. ಹಾಗೂ ಎದೆಹಾಲು ನೀಡುವುದರಿಂದ ತಾಯಿ ಮತ್ತು ಮಗುವಿನ ಸಂಬಂದ ಇನ್ನಷ್ಟು ಉತ್ತಮವಾಗಿರುತ್ತದೆ. ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ. ಎದೆಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ತಾಯಿ ಮಗುವಿನ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ, ಇದರಿಂದ ಭಾವನಾತ್ಮಕವಾಗಿ ಮಗುವಿನ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಇಬ್ಬರ ನಡುವೆ ಉತ್ತಮ ಭಾಂದವ್ಯ ಮತ್ತು ಪ್ರೀತಿ ಬೆಳೆಯುತ್ತದೆ.
ತಾಯಿಗೆ ಪ್ರಸವದ ನಂತರದ ರಕ್ತ ಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ ಮತ್ತು ಋತುಚಕ್ರವು ನಿಧನವಾಗಿ ಆಗುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮತ್ತು ಧನಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲುಉಣಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಮಾನಸಿಕ ನೆಮ್ಮದಿ ಸಿಗಲು ಸಾಕಷ್ಟು ಸಹಾಯ ಮಾಡುತ್ತದೆ ಹಾಗೂ ಒಂದು ಮಗುವಿಗೆ ಅಂತರ ಕಾಯ್ದುಕೊಂಡಂತಾಗಲು ಸಹಕಾರಿಯಾಗುತ್ತದೆ.
ಮಗುವಿನ ಮೊದಲ ಆರು ತಿಂಗಳ ಕಾಲ ಕೇವಲ ತಾಯಂದಿರು ಎದೆಹಾಲನ್ನಷ್ಟೇ ನೀಡುವುದು ಒಳ್ಳೆಯದು. ಇದು ವಾಂತಿಬೇಧಿ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಅದನ್ನು ಜೀರ್ಣಿಸುವುದು ಸುಲಭ. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಅಲ್ಲದೆ ಮಗುವನ್ನು ವಾಂತಿಭೇಧಿಯಿಂದ ರಕ್ಷಿಸುತ್ತದೆ.
ಮಹಿಳೆಯರಲ್ಲಿನ ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ನ್ನು ಸುಲಭವಾಗಿ ತಡೆಗಟ್ಟಬಹುದು. ಎದೆ ಹಾಲು ನೈಸರ್ಗಿಕವಾಗಿ ಸಿಗುವುದರಿಂದ ಯಾವುದೇ ರೀತಿಯ ಹಾಲಿಗಾಗಿ ದುಂದು ವೆಚ್ಚಮಾಡಬೇಕಾಗಿಲ್ಲ. ಅತಿಸಾರ ಮತ್ತು ನ್ಯೂಮೊನಿಯಾದಂತಹ ರೋಗಗಳಲ್ಲಿ ಎಳೆಯ ಕಂದಮ್ಮಗಳು ಅತ್ಯಂತ ಅಪಾಯಕ್ಕೊಳಪಡುತ್ತಾರೆ. ಇದರಿಂದ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗುವುದು ಕೂಡ. ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಎಲ್ಲರೂ ಅರಿಯಬೇಕಾಗಿದೆ.
ಹಾಲುಣಿಸುವ ಕ್ರಮ;- ಹುಟ್ಟಿದ ಮಕ್ಕಳಿಗೆ ತಿಂಗಳವರೆಗೆ ದಿನಕ್ಕೆ ಕನಿಷ್ಟ 8 ರಿಂದ 12 ಭಾರಿ ಹಾಲುಣಿಸಬೇಕು ಮತ್ತು ಮಗು ಪ್ರತಿ ಬಾರಿ ಅತ್ತಾಗಲು ಹಾಲು ಕುಡಿಸಬೇಕು. ಆರೋಗ್ಯವಂತ ಮಗುವಿಗೆ 90 ನಿಮಿಷಕ್ಕೊಂದು ಬಾರಿ ಹಾಲುಣಿಸಬೇಕು. ಎದೆಹಾಲು ಬೇಗ ಜೀರ್ಣವಾಗುವ ಕಾರಣ ಮಗುವಿಗೆ ಬೇಗ ಹಸಿವಾಗುವುದರೊಂದಿಗೆ ಗಂಟಲು ಒಣಗುವ ಸಾಧ್ಯತೆ ಇದ್ದು ಆಗಾಗ ಹಾಲು ಕುಡಿಸುತ್ತಿರಬೇಕು.
ತಾಯಿಗೆ ಮೊದಲು ಎದೆಹಾಲುಣಿಸುವ ವಿಧಾನ ಸರಿಯಾಗಿ ತಿಳಿಯದೆ ಮೊಲೆತೊಟ್ಟು ಒಡೆದು ರಕ್ತ ಬರಬಹುದು ಹಾಲುಣಿಸುವಲ್ಲಿ ಕಷ್ಟಪಡಬಹುದು ಮತ್ತು ಎದೆಭಾಗ ಎದೆತೊಟ್ಟು ಶುಚಿಗೊಳಿಸುವುದು ತಿಳಿದಿರಬೇಕಾಗುತ್ತದೆ. ತೆರೆ ಮರೆಯಲ್ಲಿ ಮಗುವಿಗೆ ಹಾಲುಣಿಸಿದರೆ ಎದೆಹಾಲು ನಿರಾಳವಾಗಿ ಹೆಚ್ಚಾಗುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ಯಾವುದೇ ಚಿಂತೆ, ಯೋಚನೆಗಳಿರಬಾರದು ಆಗ ಹಾಲು ವೃದ್ದಿಸಿ ಮಗುವಿಗೆ ಸಾಕಷ್ಟು ದೊರೆಯುತ್ತದೆ. ಮತ್ತು ಮಗುವಿಗೆ ಹಾಲುಣಿಸುವ ಕ್ರಮ ಮತ್ತು ಕೂರುವ ಬಗ್ಗೆ ತಿಳಿದಿರಬೇಕು. ಎದೆ ಹಾಲು ನೀಡುವುದರಿಂದ ಕಾಯಿಲೆ ಮಾತ್ರವಲ್ಲದೆ ಶಿಶು ಮರಣವನ್ನು ತಪ್ಪಿಸಬಹುದು.
ಈ ಸಮಯದಲ್ಲಿ ತಮ್ಮಲ್ಲೇ ಬೆಳೆಯುವ ದವಸಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಮತ್ತು ಕಾಯಿಪಲ್ಯಗಳನ್ನು ತಯಾರಿಸಿ ಸೇವಿಸುವ ಶಿಕ್ಷಣ ತಾಯಂದಿರಿಗೆ ತಿಳಿದಿರಬೇಕು. ಸಾಕಷ್ಟು ಪೌಷ್ಟಿಕ ಆಹಾರವನ್ನು ಮತ್ತು ಸಮತೋಲನ ಆಹಾರ ಹೆಚ್ಚಾಗಿ ಬಳಸಬೇಕು.
ಮಗುವಿಗೆ 6 ತಿಂಗಳು ಕಡ್ಡಾಯ;- ಮಗುವಿಗೆ ತಾಯಿ ಹಾಲಿಗಿಂತ ಬೇರೊಂದು ಆಹಾರ ಇಲ್ಲ, ಆದ್ದರಿಂದ ಮೊದಲ 6 ತಿಂಗಳು ಕಡ್ಡಾಯವಾಗಿ ಎದೆಹಾಲು ನೀಡಬೇಕು. 6 ತಿಂಗಳ ನಂತರ 2 ವರ್ಷದವರೆಗೆ ಎದೆಹಾಲು ಮುಂದುವರೆಸುತ್ತಾ ಘನ ಆಹಾರ ನೀಡಲು ಆರಂಭಿಸಬೇಕು. 2 ವರ್ಷದ ನಂತರವೂ ಎದೆಹಾಲು ನೀಡಲು ಮುಂದುವರೆಸಿದರೆ ಮಗುವಿಗೆ ಅನೇಕ ಪ್ರಯೋಜನಗಳು ಸಿಗಲಿವೆ.
ಸ್ತನ್ಯಪಾನವು ಮೆದುಳಿನ ಬೆಳವಣಿಗೆ ಉತ್ತೇಜಿಸುತ್ತದೆ, ಅಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳು ಮತ್ತು ಸಾವಿನಿಂದ ಶಿಶುಗಳನ್ನು ರಕ್ಷಿಸುತ್ತದೆ ಮತ್ತು ನಂತರದ ಜೀವನದಲ್ಲಿ ಸ್ಥೂಲಕಾಯತೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೂ ಜಾಗತಿಕವಾಗಿ ಸಾಕಷ್ಟು ಪೋಷಕರ ರಜೆ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಬೆಂಬಲದ ಕೊರತೆ ಹಾಗೂ ಫಾರ್ಮುಲಾ ಹಾಲಿನ ಕಂಪನಿಗಳ ಮಾರುಕಟ್ಟೆ ಪ್ರಭಾವ ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಬೇಕಾದ ಅನಿವಾರ್ಯದ ಅರಿವಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಒಳಗೊಂಡ ಸ್ತನ್ಯಪಾನ ಮತ್ತು ಚಿಕ್ಕ ಮಕ್ಕಳ ಆಹಾರ ಪದ್ದತಿಗಳನ್ನು ಉತ್ತೇಜಿಸುವ ಕೇಂದ್ರೀಕೃತ ಒಮ್ಮತದ ಚಟುವಟಿಕೆಗಳನ್ನು ಕೈಗೊಳ್ಳಲಾಗಿರುತ್ತದೆ.
ಮಗುವಿಗೆ ಜನ್ಮನೀಡಿದ ತಾಯಿಯೇ ದನ್ಯ. ಇಂತಹ ಅಪರೂಪದ ಸಮಯವನ್ನು ವ್ಯರ್ಥಮಾಡದೇ ನಿಮ್ಮ ಆರೋಗ್ಯ ಮತ್ತು ಮಗುವಿನ ಆರೋಗ್ಯಕ್ಕೆ ಅಡಿಪಾಯ ಹಾಕಬೇಕೆನ್ನುವ ಮಹಾದಾಸೆಯಿಂದ ಮತ್ತು ಮಗುವಿನ ಉಳಿವಿಕೆಗೆ ಮತ್ತು ಆರೈಕೆಗಾಗಿ ಸ್ತನ್ಯಪಾನದ ಮಹತ್ವ ಸಾರುವ ಈ ಲೇಖನ ಪೂರಕವಾದರೆ ನಮ್ಮ ಶ್ರಮ ಸಾರ್ಥಕವಾದಂತೆ.
ಆರೋಗ್ಯ ಕುರಿತ ವಿಶೇಷ ಲೇಖನ :
ಜಿ.ವಿ.ಶ್ರೀನಾಥ್, ಗಾವಡಗೆರೆ
ಹಿರಿಯ ಆರೋಗ್ಯ ನಿರೀಕ್ಷಕರು
ತಾ.ಆರೋಗ್ಯಾಧಿಕಾರಿ ಕಚೇರಿ, ಮಡಿಕೇರಿ ತಾ.