ಗುಡ್ಡೆ ಹೊಸೂರು ಗ್ರಾ.ಪಂ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ತೆಪ್ಪದ ಕಂಡಿ ಬಳಿ ಕಾವೇರಿ ನದಿ ನೀರಿನ ಪ್ರಮಾಣ ಪ್ರತಿ ವರ್ಷ ಅಪಾಯದ ಅಂಚು ಮೀರಿ ಹರಿಯುತ್ತಿದ್ದು ಇದರಿಂದ ಅಲ್ಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಅಲ್ಲಿ ನೆಲೆಸಿರುವ 22 ಮನೆಗಳನ್ನು ಸ್ಥಳಾಂತರ ಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕ್ಷ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.
ಕೆಲವೊಂದು ನಿವಾಸಿಗಳಿಗೆ ಈಗಾಗಲೇ ಬಸವನಹಳ್ಳಿ ಬಳಿ ನಿವೇಶನ ಗುರುತಿಸಿ ನೀಡಲಾಗಿದ್ದರೂ, ಫಲಾನುಭವಿಗಳು ಮತ್ತೆ ನದಿ ತಟದಲ್ಲಿ ನೆಲೆಸಿರುವ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಸಮರ್ಪಕ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ. ನದಿ ಪ್ರವಾಹದಿಂದ ಸಂತ್ರಸ್ತರಾದ ನಿವಾಸಿಗಳಿಗೆ ಈಗಾಗಲೇ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸಭೆಗೆ ಮಾಹಿತಿ ಒದಗಿಸಿದರು.
ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭ ಆಸ್ತಿ ಕಳೆದುಕೊಳ್ಳುವ ಜನರಿಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಮುಖಾಂತರ ನಿವೇಶನ ಕೊಡುವ ಅಗತ್ಯ ಇರೋದಿಲ್ಲ ಎನ್ನುವ ಚರ್ಚೆ ಕೂಡ ನಡೆಯಿತು. ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷರಾದ ಪಟ್ಟು ಮಾದಪ್ಪ ಮತ್ತು ಸದಸ್ಯರು ಇದ್ದರು.