ಈ ಹಿಂದೆ ಗೋವುಗಳನ್ನು ಗೋ ರಕ್ಷಕರು ಅಥವಾ ಪೊಲೀಸ್ ಇಲಾಖೆಯು ವಶ ಪಡಿಸಿಕೊಂಡಾಗ ಕೊಡಗಿನ ಶ್ರೀ ಕೃಷ್ಣ ಗೋಶಾಲೆಗೆ ಅಥವಾ ಹೊರಗಿನ ಗೋಶಾಲೆಗಳಲ್ಲಿ ಗೋವುಗಳನ್ನು ಬೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಯ ಗೋಶಾಲೆಗಳಲ್ಲಿ ಗೋವುಗಳನ್ನು ಸ್ವೀಕರಿಸದೆ ನಿಮ್ಮ ಜಿಲ್ಲೆಯಲ್ಲಿಯೇ ಬಿಡಿ ಎಂದು ಹೇಳಿ ಕಳುಹಿಸಲಾಗುತ್ತಿದೆ. ಕೊಡಗಿನಲ್ಲಿ ಗೋವುಗಳನ್ನು ಪಾಲನೆ ಮಾಡಲು ಜಾಗವಿಲ್ಲದಾಗ ಪೊಲೀಸ್ ಇಲಾಖೆಯವರು ವಶ ಪಡಿಸಿಕೊಂಡ ಗೋವುಗಳನ್ನು ಎಲ್ಲಿ ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಕೊಡಗಿನಲ್ಲಿರುವ ಗೋಮಾಳ ಜಾಗಗಳನ್ನು ಷರತ್ತು ಮುಖಾಂತರ ಗೋ ಶಾಲೆ ನಡೆಸುವವರಿಗೆ ಬೋಗ್ಯಕ್ಕೆ ನೀಡಿದರೆ ಗೋವುಗಳನ್ನು ಸುರಕ್ಷಿತವಾಗಿರಸಬಹುದು. ಅಲ್ಲದೇ ಈಗ ಇರುವ ಸರ್ಕಾರಿ ಗೋ ಶಾಲೆಯನ್ನು ಗೋಶಾಲೆ ನಡೆಸುವವರಿಗೆ ಬೋಗ್ಯಕ್ಕೆ ನೀಡಿದರೆ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ಮತ್ತು ರೈತರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಬರೆಕುಸಿತ, ಮಣ್ಣು ಕುಸಿತಗೊಳ್ಳುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಿರುವಾಗ ಅಪಾಯದ ಅಂಚಿನಲ್ಲಿರುವ ಬೆಟ್ಟದ ಮೇಲೆ ಹೋಂಸ್ಟೇ, ರೆಸಾರ್ಟ್ ಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಇದು ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಕೂಡ ಕಾಂಕ್ರೀಟ್ ಕಾಡಾಗುವುದರಲ್ಲಿ ಸಂಶಯವಿಲ್ಲ ಎಂದರು. ತೋಟಗಳಲ್ಲಿ ಇರುವ ಮರಗಳನ್ನು ಹೋರತು ಪಡಿಸಿ ಕಾಡಿನಲ್ಲಿರುವ ಮರಗಳ ತೆರವಿಗೆ ಅನುಮತಿ ನೀಡಬಾರದು. ಆದ್ದರಿಂದ ಜಿಲ್ಲಾಡಳಿತ ಇಂತವುಗಳಿಗೆ ಅನುಮತಿ ನೀಡಬಾರದು. ತಪ್ಪಿದ್ದಲ್ಲಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಜಿಲ್ಲೆಯ ವಿವಿಧೆಡೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡಲಿದೆ. ಆದ್ದರಿಂದ ಅರಣ್ಯ ಇಲಾಖೆ ಟೀಕ್ ಮರಗಳನ್ನು ತೆಗೆದು ಪ್ರಾಣಿ ಪಕ್ಷಿಗಳಿಗೆ, ಆನೆಗಳಿಗೆ ಆಹಾರವನ್ನು ನೀಡುವ ಮರಗಳನ್ನು ಕಾಡಿನಲ್ಲಿ ಬೆಳೆಸಬೇಕೆಂದು ಮನವಿ ಮಾಡಿದರು. ಕೊಡಗಿನ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಕಾಟ ಮೀತಿಮೀರಿದ್ದು ಸಾರ್ವಜನಿಕರು ಆತಂಕದಲ್ಲಿ ನಡೆದಾಡುವಂತಾಗಿದೆ. ನಗರ ಸಭೆಯ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರೆ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಬಿಡುತ್ತೇವೆ ಎಂದು ಹೇಳುತ್ತಲೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಹರೀಶ್ ಆಚಾರ್ಯ, ಅಧಿಕಾರಿಗಳಿಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಖಾಸಗಿಯವರಿಗೆ ಒಪ್ಪಂದದ ಮೇರೆಗೆ ಹಣ ನೀಡಿ ನಾಯಿಗಳಿಗೆ ಸಂತನ ಹರಣ ಚಿಕಿತ್ಸೆ ನೀಡಲು ಮುಂದಾಗಲಿ ಎಂದರು. ಮಡಿಕೇರಿ ನಗರದಲ್ಲಿ ಮತ್ತು ಕೊಡಗಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲಿ ನಿಂತು ರಸ್ತೆ ಗುಂಡಿಮಯವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಅಥವಾ ಚರಂಡಿಗಳ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ನಿರ್ಮಾಣದ ಸಂದರ್ಭ ಕಳಪೆ ಕಾಮಗಾರಿ ನಡೆಯಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‍ನ ಜಿಲ್ಲಾಧ್ಯಕ್ಷ ಪಿ.ಎಸ್.ಭರತ್, ಕಾರ್ಯದರ್ಶಿ ಸೋಮನಾಥ್, ಸಲಹೆಗಾರ ಚೌರೀರ ರಮೇಶ್ ಕಾವೇರಪ್ಪ, ಸದಸ್ಯ ಅಮ್ಮಾಟಂಡ ಪೆಮ್ಮಯ್ಯ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ಹಾಜರಿದ್ದರು.