ಸುಂಟಿಕೊಪ್ಪ ಆ.14 NEWS DESK : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮಳೆಯ ರಭಸಕ್ಕೆ ಸುಂಟಿಕೊಪ್ಪದಿಂದ ಗದ್ದೆಹಳ್ಳಕ್ಕಾಗಿ ಹರಿಯುವ ತೋಡು ತುಂಬಿಕೊಂಡ ಪರಿಣಾಮ ಗದ್ದೆಹಳ್ಳ ಗಿರಿಯಪ್ಪ ಮನೆ ತಗ್ಗು ಪ್ರದೇಶದಲ್ಲಿ ನಿರ್ಮಿಸಲಾಗಿರುವ 10 ರಿಂದ 12 ಮನೆಗಳಿಗೆ ಮಳೆಯ ನೀರು ಸೇರಿದಂತೆ ಕೊಳಚೆ ನೀರು ನುಗ್ಗಿ ಮನೆಯ ಗೃಹೋಪಯೋಗಿ ವಸ್ತುಗಳು ಹಾಗೂ ಪಿಠೋಪಕರಣಗಳು ಹಾನಿಯಾಗುವ ಆತಂಕ ಸೃಷ್ಟಿಯಾಯಿತು. ಕಳೆದ ಕೆಲವು ವರ್ಷಗಳಿಂದ ಈ ಭಾಗದ ಗದ್ದೆಹಳ್ಳ ಗಿರಿಯಪ್ಪ ಮನೆ ಭಾಗದಲ್ಲಿ ಹರಿಯುತ್ತಿರುವ ತೋಡಿನ ನೀರು ಮಳೆಬಂದಾಗ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಸಂಬಂಧಿಸಿ ಇಲಾಖೆಯವರಿಗೆ ದೂರು ನೀಡಲಾಗಿದ್ದರೂ ಅಧಿಕಾರಿಗಳು ಬಂದು ಭೇಟಿ ನೀಡಿ ಹೋಗುತ್ತಿದ್ದಾರೆ ಹೊರತು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಸುಂಟಿಕೊಪ್ಪ ಗ್ರಾ.ಪಂ ಅಧಕ್ಷ ಪಿ.ಆರ್.ಸುನಿಲ್‍ಕುಮಾರ್ ಹಾಗೂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಈ ಭಾಗದಲ್ಲಿ ಪಟ್ಟಣದ ನೀರು ಹರಿಯುವ ತೋಡು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ನಿತ್ಯ ಸಂಕಷ್ಟವನ್ನು ಎದುರಿಸುವಂತಾಗಿದೆ. ಸಂಬಂಧಿಸಿದ ಇಲಾಖೆಗೆ ತೋಡಿಗೆ ವೈಜ್ಞಾನಿಕವಾದ ಕಾಮಗಾರಿ ನಿರ್ವಹಿಸಲು ಕೂಡಲೇ ಮುಂದಾಗಬೇಕು. ಮುಂದಿನ ದಿಗಳಲ್ಲಿ ಅನಾಹುತ ಹಾಗೂ ಪ್ರಾಣಹಾನಿಗಳನ್ನು ಸಂಭವಿಸುವ ಮೊದಲೇ ಅನಾಹುತಗಳನ್ನು ತಪ್ಪಿಸಲು ಮುಂದಾಗಲಿ ಎಂದು ಪಿ.ಆರ್.ಸುನಿಲ್‍ಕುಮಾರ್ ಹೇಳಿದರು.