ಮಡಿಕೇರಿ ಆ.18 NEWS DESK : ಕುಶಾಲನಗರ ಪೊಲೀಸ್ ಮತ್ತು ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಪ್ 2024 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಲ್ಲೂಕು ಶಿಕ್ಷಣ ಇಲಾಖೆ ತಂಡ ಟ್ರೋಫಿಯನ್ನು ಗೆದ್ದುಕೊಂಡಿದೆ. ದ್ವಿತೀಯ ಟ್ರೋಪಿಯನ್ನು ಕುಶಾಲನಗರ ಡಿವೈಎಸ್‍ಪಿ ನೇತೃತ್ವದ ಪೊಲೀಸ್ ಇಲಾಖೆ ತಂಡ ಗಳಿಸಿದೆ. ಕುಶಾಲನಗರ ಪೊಲೀಸ್, ಶಿಕ್ಷಣ, ಪುರಸಭೆ, ವಕೀಲರ ತಂಡ, ಕಂದಾಯ ಇಲಾಖೆ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಒಟ್ಟು ಆರು ತಂಡಗಳು ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡವು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸೋಮವಾರಪೇಟೆ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಆರ್.ವಿ.ಗಂಗಾಧರಪ್ಪ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಸ್ಫೂರ್ತಿ ಪ್ರದರ್ಶಿಸಬೇಕು. ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು. ಕಂದಾಯ ಇಲಾಖೆಯ ತಂಡದ ನಾಯಕರು ಹಾಗೂ ಕಂದಾಯ ಪರಿವೀಕ್ಷಕ ಹೆಚ್.ಎಸ್.ಸಂತೋಷ್ ಅವರು ಮಾತನಾಡಿ ಕೇವಲ ಎರಡು ದಿನಗಳ ಅಂತರದಲ್ಲಿ ಆರು ತಂಡಗಳನ್ನು ರಚನೆ ಮಾಡಿ ಪಂದ್ಯಾಟ ನಡೆಸಲಾಗಿದೆ. ಈ ಸಂದರ್ಭ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿ ದಿನನಿತ್ಯದ ಕೆಲಸದ ಒತ್ತಡದ ನಡುವೆ ಕ್ರೀಡೆಯಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕುಶಾಲನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್, ತಾಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಪಂದ್ಯಾವಳಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದ ಪೊಲೀಸ್ ತಂಡ ಕಂದಾಯ ಪರಿವೀಕ್ಷಕ ಸಂತೋಷ್ ಅವರ ನೇತೃತ್ವದ ಕಂದಾಯ ಇಲಾಖೆ ತಂಡ, ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ನೇತ್ರತ್ವದ ಪುರಸಭಾ ತಂಡ , ಪ್ರತಾಪ್ ನೇತೃತ್ವದ ಶಿಕ್ಷಕರ ತಂಡ,ವಕೀಲರಾದ ಕೆ ಪಿ ಶರತ್ ನೇತೃತ್ವದ ವಕೀಲರ ತಂಡ, ಕೆ ಜೆ ಶಿವರಾಜ್ ನೇತೃತ್ವದ ಪತ್ರಕರ್ತರ ತಂಡ ಸೇರಿದಂತೆ ಆರು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪಾಲ್ಗೊಂಡ ಎಲ್ಲಾ ತಂಡಗಳಿಗೂ ಟ್ರೋಪಿ ವಿತರಿಸಲಾಯಿತು.











