ಮಡಿಕೇರಿ NEWS DESK ಆ.23 : ನಗರದ ಶ್ರೀಕೋಟೆ ಮಾರಿಯಮ್ಮ ದೇವಾಲಯದಲ್ಲಿ ಆ.16ರ ಮಧ್ಯರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಂತೂರು-ಮೂರ್ನಾಡು ಗ್ರಾಮದ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಅಲ್ತಾಬ್ ಆಲಿ (27) ಹಾಗೂ ಕೃತ್ಯ ನಡೆಸುವ ಉದ್ದೇಶದಿಂದ ಅಸ್ಸಾಂನಿಂದ ಬಂದಿದ್ದ ಮೀರ್ ಹುಸೇನ್ (ನೂರ್ ಹುಸೇನ್)(36) ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಕಳವು ಮಾಡಿ 3 ಗ್ರಾಂ ಚಿನ್ನದ ಮಾಂಗಲ್ಯ, 111 ಗ್ರಾಂ ಬೆಳ್ಳಿಯ ಕಿರೀಟ, 59 ಗ್ರಾಂ ಬೆಳ್ಳಿಯ ದೃಷ್ಟಿ ಬೊಟ್ಟು ಮತ್ತು ರೂ.95,501 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು 2 ಹುಂಡಿಗಳನ್ನು ಒಡೆದು ಅಂದಾಜು ರೂ.2.50 ಲಕ್ಷ ನಗದನ್ನು ಹಾಗೂ ದೇವಿಯ ಮೂರ್ತಿಗೆ ಅಳವಡಿಸಿದ್ದ ಸುಮಾರು ರೂ.1.16 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಕುರಿತು ಕೋಟೆ ಮಾರಿಯಮ್ಮ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಸೋಮಯ್ಯ ಟಿ.ಪಿ ಅವರು ನೀಡಿದ ದೂರಿನ ಹಿನ್ನೆಲೆ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಡಿವೈಎಸ್‌ಪಿ ಮಹೇಶ್ ಕುಮಾರ್, ಸಿಪಿಐ ರಾಜು ಪಿ.ಕೆ, ಪಿಎಸ್‌ಐ ಲೋಕೇಶ್, ಮಡಿಕೇರಿ ನಗರ ಠಾಣೆ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದರು.