
ಮಡಿಕೇರಿ ಆ.23 NEWS DESK : ವಿರಾಜಪೇಟೆಯ ಕುಟ್ಟಂದಿಯ ಕೆ.ಬಿ ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಶಿವಣ್ಣ ಎಸ್. ಅವರಿಗೆ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿ ವರ್ಷ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ರಾಜ್ಯದ ಎಲ್ಲಾ ಜಿಲ್ಲೆಗಳ ಸಾಧಕರನ್ನು ಗುರುತಿಸಿ ನೀಡುತ್ತಿರುವ ಪ್ರಶಸ್ತಿಗೆ ಈ ಬಾರಿ ಕೊಡಗು ಜಿಲ್ಲೆಯಿಂದ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ವಿಧಾನಸೌಧದ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪ್ರಮುಖರು ಹಾಗೂ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಹವ್ಯಾಸಿ ರಂಗಭೂಮಿ ಕಲಾವಿದರು, ಹಾಡುಗಾರರೂ ಆಗಿರುವ ಶಿವಣ್ಣ ಅವರು ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತಿ ಹೊಂದಿರುವ ಇವರು ಕಿರುತೆರೆಯ ಧಾರಾವಾಹಿಯೊಂದರಲ್ಲಿ ಅಭಿನಯಿಸುವ ತಯಾರಿಯಲ್ಲಿದ್ದಾರೆ.








