ಮಡಿಕೇರಿ ಆ.28 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪ ಸೇವಾ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು 35ಕ್ಕೂ ಹೆಚ್ಚಿನ ಮಕ್ಕಳು ರಾಧಾಕೃಷ್ಣನ ವೇಷಧರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿ ಸಂಭ್ರಮ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಇಂದಿನ ಒತ್ತಡ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರವಚನಕಾರರಾಗಿ ಆಗಮಿಸಿದ ಹಾಸನ ಸೇವಾ ಕೇಂದ್ರ ಸಂಚಾಲಕಿ ಬ್ರಹ್ಮಾಕುಮಾರಿ ಆಶಾಕ್ಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ರಹಸ್ಯವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಶ್ರೀ ಕೃಷ್ಣನು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ, ಅಹಿಂಸ ಪರಮೋದರ್ಮಿ, ಮರ್ಯಾದ ಪುರುಷೋತ್ತಮ, ಹದಿನಾರು ಕಲ ಸಂಪನ್ನ ಹಾಗೂ ಸಂಪೂರ್ಣ ಪವಿತ್ರನಾಗಿದ್ದನು ಅದನ್ನು ಪ್ರತಿಯೊಬ್ಬರು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸಹ ದೈವತ್ವ ಪಡೆದುಕೊಳ್ಳಲು ಸಾಧ್ಯ. ಶ್ರೀ ಕೃಷ್ಣನ ಜೀವನ ಚರಿತ್ರೆಯಲ್ಲಿ ಬರುವ ಒಂದೊಂದು ಘಟನೆಗಳಲ್ಲಿ ಆಳವಾದ ಆಧ್ಯಾತ್ಮಿಕ ರಹಸ್ಯ ಹಾಗೂ ಜೀವನ ಮೌಲ್ಯ ಅಡಗಿದೆ ಎಂದರು. ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದ ಗೋಣಿಕೊಪ್ಪ ಸೇವಾ ಕೇಂದ್ರ ಸಂಚಾಲಕಿ ಬ್ರಹ್ಮಾಕುಮಾರಿ ರೇಖಕ್ಕ ಸರ್ವರು ರಾಜಯೋಗ ಶಿಕ್ಷಣ ಪಡೆದು ತಮ್ಮ ಜೀವನವನ್ನು ಶ್ರೇಷ್ಠ ಜೀವನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಬ್ರಹ್ಮಾಕುಮಾರಿ ಕಾವ್ಯಕ್ಕ ಕಾರ್ಯಕ್ರಮದ ನಿರೂಪಣೆ ಹಾಗೂ ಸಂಸ್ಥೆಯ ಪರಿಚಯವನ್ನು ಮಾಡಿದರು. ಡಾ.ಶಿವಪ್ಪ ಹಾಗೂ ಬಬಿತಕ್ಕ ದೈವಿ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಬಿ.ಕೆ.ರೇಷ್ಮಕ್ಕ ವಂದಿಸಿದರು . ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು ಹಾಗೂ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ವೇಷಧರಿಸಿದ ಎಲ್ಲಾ ಪುಟಾಣಿಗಳಿಗೆ ಈಶ್ವರೀಯ ಉಡುಗೊರೆ ನೀಡಲಾಯಿತು.









