ಕುಶಾಲನಗರ ಸೆ.2 NEWS DESK : ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಪ್ರಾಯೋಗಿಕವಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕೃಷಿ ಪಾಠದ ಬಗ್ಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಕೂಡುಮಂಗಳೂರು (ಕೂಡ್ಲೂರು ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು. ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವತಿಯಿಂದ ಎಸ್.ಡಿ.ಎಂ.ಸಿ ವಿದ್ಯಾರ್ಥಿ ಸಂಘ ಹಾಗೂ ಕೂಡ್ಲೂರು ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಭತ್ತದ ಗದ್ದೆಯಲ್ಲಿ ಶಾಲಾ ಮಕ್ಕಳು ಕೃಷಿಕರೊಂದಿಗೆ ಸೇರಿ ಗದ್ದೆ ನಾಟಿ ಮಾಡುವ ಮೂಲಕ ಗಮನ ಸೆಳೆದರು. ಪ್ರಗತಿಪರ ಕೃಷಿಕ ಎಂ.ಎನ್.ಕಾಳಪ್ಪ ಅವರ ಮಾರ್ಗದರ್ಶನದಲ್ಲಿ ಜನಪದ ಹಾಡುಗಳನ್ನು ಹೇಳುತ್ತಾ ಸಂಭ್ರಮ- ಸಡಗರದಿಂದ ಗದ್ದೆ ನಾಟಿ ಮಾಡಿದರು. ಶಾಲಾ ಮಕ್ಕಳೊಂದಿಗೆ ಕೆಸರುಗದ್ದೆಗೆ ಇಳಿದು ಗದ್ದೆಯಲ್ಲಿ ಭತ್ತದ ಗದ್ದೆ ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಾಲಾ ಮುಖ್ಯೋಪಾಧ್ಯಾಯ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಕೆಸರು ಗದ್ದೆ ಕ್ರೀಡೆ ಮತ್ತು ಗದ್ದೆ ನಾಟಿ ಕಾರ್ಯ, ರೈತರ ಜೀವನ ಕ್ರಮ ಹಾಗೂ ಕೃಷಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಇಂತಹ ಕೆಸರುಗದ್ದೆಯಲ್ಲಿ ಭತ್ತದ ನಾಟಿ ಕಾರ್ಯ ನಮ್ಮ ಶಾಲೆಯ ವತಿಯಿಂದ ಸತತವಾಗಿ 3ನೇ ವರ್ಷ ಭತ್ತದ ಗದ್ದೆ ನಾಟಿ ಕಾರ್ಯವನ್ನು ಕೂಡ್ಲೂರು ಗ್ರಾಮದ ದೇವಾಲಯ ಸಮತಿ ಮತ್ತು ಜನರ ಸಹಕಾರದೊಂದಿಗೆ ಸಂಘಟಿಸಲಾಗಿದೆ ಎಂದರು. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಪ್ರಗತಿಪರ ಕೃಷಿಕ ಎಂ.ಎನ್.ಕಾಳಪ್ಪ ಮಾತನಾಡಿ, ಈ ಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಜಿ.ಪ್ರೇಮಕುಮಾರ್ ಮತ್ತು ಶಿಕ್ಷಕರ ವಿಶೇಷ ಕಾಳಜಿಯಿಂದ ಶಾಲಾ ಮಕ್ಕಳು ಗದ್ದೆಗೆ ಇಳಿದು ಗದ್ದೆ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಹೊಂದುತ್ತಿರುವುದು ಶ್ಲಾಘನೀಯ ಎಂದರು. ಶಾಲಾ ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರೈತರ ಕೃಷಿ ಜೀವನ ಕ್ರಮದ ಬಗ್ಗೆ ಹೆಚ್ಚಿನ ಅರಿವು ಹೊಂದುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಮಾತನಾಡಿ, ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಜಿ.ಪ್ರೇಮಕುಮಾರ್ ಅವರು ವಿಶೇಷ ಆಸಕ್ತಿ ವಹಿಸಿ ತಮ್ಮ ಶಿಕ್ಷಕರ ತಂಡದೊಂದಿಗೆ 3ನೇ ವರ್ಷದಲ್ಲಿ ಗದ್ದೆ ನಾಟಿ ಕಾರ್ಯ ಸಂಘಟಿಸಿರುವುದು ಬಹಳ ಸಂತಸ ತಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಮಾತನಾಡಿ, ಗದ್ದೆಯಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡು ಕೃಷಿಯ ಅನುಭವ ಪಡೆಯುತ್ತಿರುವುದು ಭವಿಷ್ಯದಲ್ಲಿ ಮಕ್ಕಳು ಕೃಷಿ ಕಾರ್ಯದಲ್ಲಿ ತೊಡಗಲು ಪ್ರೇರೇಪಣೆ ನೀಡಲಿದೆ ಎಂದು ಹೇಳಿದರು. ಗದ್ದೆನಾಟಿ ಕಾರ್ಯದಲ್ಲಿ ಮಕ್ಕಳೊಂದಿಗೆ ಎಸ್.ಡಿ.ಎಂ.ಸಿ ಸದಸ್ಯೆ ಶೃತಿ, ಸ್ನಾತಕೋತ್ತರ ಪದವೀಧರೆ ಪ್ರಕೃತಿ, ಕೃಷಿಕರಾದ ಕೆ.ಆರ್.ನಾಗರಾಜ್, ಸಾವಿತ್ರಮ್ಮ, ರಜನಿ, ಪ್ರಕಾಶ್, ಭಾಗ್ಯ ಸೇರಿದಂತೆ ಕೃಷಿಕರು ಮತ್ತು ಗ್ರಾಮಸ್ಥರು ಇದ್ದರು.
Breaking News
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*
- *ಸಿದ್ದಾಪುರದಲ್ಲಿ ನೃತ್ಯ ಸಂಭ್ರಮ : ಗಮನ ಸೆಳೆದ ನೃತ್ಯ ವೈಭವ*
- *ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ವಲಯ ಇಸ್ಲಾಮಿಕ್ ಕಲೋತ್ಸವ : ವಿರಾಜಪೇಟೆ ಯೂನಿಟ್ ಚಾಂಪಿಯನ್*
- *ಸುಂಟಿಕೊಪ್ಪ : ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*
- *ಕಣಿವೆಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ*
- *ಪೆನ್ಷನ್ಲೇನ್ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ*
- *ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ಸ್ : ಕೊಡಗು ವಿದ್ಯಾಲಯಕ್ಕೆ ಚಾಂಪಿಯನ್ ಪಟ್ಟ*
- *ಕನಕದಾಸರಿಗೆ ಗೌರವ ಅರ್ಪಿಸಿದ ಸಿಎಂ*
- *ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಮಡಿಕೇರಿ : ಕನ್ನಡ ಅನ್ನದ ಭಾಷೆಯಾಗಬೇಕು : ವೆಂಕಟೇಶ ಪ್ರಸನ್ನ*