ಮಡಿಕೇರಿ ಸೆ.3 NEWS DESK : ಕೊಡಗು ಜಿಲ್ಲಾ ದಸಾಪದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕೊಡಗು ಜಿಲ್ಲೆಯ ಕನ್ನಡ ಭಾಷಾ ಬೋಧಕರಿಗೆ “ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆಯ ಹೆಗ್ಗುರುತುಗಳು” ಎಂಬ ವಿಷಯದ ಕುರಿತು ಸೆ.22 ರಂದು ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ3 ಗಂಟೆಯವರೆಗೆ ಮಡಿಕೇರಿಯ ಕೊಹಿನೂರು ರಸ್ತೆಯ ಎಸ್ ಬಿಐ ಬ್ಯಾಂಕ್ ಹತ್ತಿರದ “ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ” ದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಲಿದ್ದು, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸ ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ನರೇಂದ್ರಕುಮಾರ್ ಭಾಗವಹಿಸಲಿದ್ದಾರೆ. ಕೊಡಗು ದಸಾಪದ ಜಿಲ್ಲಾಧ್ಯಕ್ಷ ಅರ್ಜುನ್ ಮೌರ್ಯ, ದಸಾಪ ದ ಮೈಸೂರು ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ ಸೇರಿದಂತೆ ಕೊಡಗಿನ ವಿವಿಧ ಕ್ಷೇತ್ರದ ಸಂಘಟಕರುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ದಸಾಪ ಪತ್ರಿಕೆ ಮತ್ತು ಮಾಧ್ಯಮ ಸಲಹೆಗಾರ ಟಿ.ಆರ್.ಸತೀಶ್ ಕುಮಾರ್ ತಿಳಿಸಿದ್ದಾರೆ. ಹಾಜರಾದ ಕೊಡಗಿನ ಎಲ್ಲಾ ಕನ್ನಡ ಭಾಷಾ ಬೋಧಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ ಹಾಗೂ ಕಾರ್ಯಕ್ರಮದ ದಿನ ಬೆಳಿಗ್ಗೆ ಸ್ಥಳದಲ್ಲೇ ನೋಂದಣಿ ಮಾಡಿಸಬಹುದು. ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಜಿಲ್ಲೆಯ ಕನ್ನಡ ಬೋಧಕ ವರ್ಗ ಇದರ ಸದುಪಯೋಗ ಪಡೆಯಲು ಕೋರಲಾಗಿದೆ ತಿಳಿಸಿದರು.