ಸೋಮವಾರಪೇಟೆ ಸೆ.3 NEWS DESK : ವಿಶ್ವದಲ್ಲಿಯೇ ಶ್ರೇಷ್ಠ ಎನಿಸಿಕೊಂಡಿರುವ ಹಿಂದೂ ಸಂಸ್ಕಾರ ಪದ್ಧತಿಯನ್ನು ಹಿಂದುಗಳಾದ ನಾವುಗಳೇ ಅಗೌರವಿಸುತ್ತಿರುವುದು ನಮ್ಮ ದುರಂತ ಎಂದು ವಿರಕ್ತ ಮಠದ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು. ಸೋಮವಾರಪೇಟೆ ಕೊಡವ ಸಮಾಜದಲ್ಲಿ ವಿಶ್ವ ಹಿಂದೂ ಪರಿಷದ್ ಸೋಮವಾರಪೇಟೆ ಪ್ರಖಂಡದ ವತಿಯಿಂದ ನಡೆದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನ ಹಾಗೂ ಷಷ್ಟಿ ಪೂರ್ತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮ ಧರ್ಮ ಮತ್ತು ಆಚರಣೆಗಳನ್ನು ನಮ್ಮವರೇ ತೆಗಳುವುದರಿಂದ ನಮ್ಮ ದೇಶದಲ್ಲಿಯೇ ಹಿಂದೂ ಧರ್ಮಕ್ಕೆ ಧಕ್ಕೆ ಬರುತ್ತಿದೆ. ಇಂತಹ ಕಾರ್ಯಗಳು ಮುಂದುವರಿಯುತ್ತಾ ಹೋದರೆ ಹಿಂದುತ್ವದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಬರಲಿದೆ. ಈ ವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿ.ಹಿಂ.ಪ. ಮಠ ಮಾನ್ಯಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಾ ಬರುತ್ತಿದೆ. ಮುಂದೆ ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್ಲಾರೂ ಸಂಘಿಗಳಾಗುವ ಮೂಲಕ ಹಿಂದೂ ಧರ್ಮ ಹಾಗೂ ಸಂಸ್ಕಾರವನ್ನು ಗೌರವಿಸುವಂತಾಗಬೇಕೆಂದರು. ವಿ.ಹಿಂ.ಪ. ನ ಜಿಲ್ಲಾ ಬೌದ್ಧಿಕ್ ಪ್ರಮುಖ್ ಚಿ.ನಾ.ಸೋಮೇಶ್ ಮಾತನಾಡಿ, 1964ರ ಆಗಸ್ಟ್ 29ರಂದು ಮುಂಬೈನಲ್ಲಿ ವಿ.ಹಿಂ.ಪ. ಸ್ಥಾಪನೆಯಾಯಿತು. ಇದರ ಸ್ಥಾಪನೆಗೆ ಬಾಬಾ ಅಮ್ಟೆಯವರು ಮೂಲ ಕಾರಣಿ ಪುರುಷರಾಗಿದ್ದರು. ಅಂದಿನಿಂದ ಸಮಾಜದಲ್ಲಿನ ಹಲವಾರು ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಾ, ಹಿಂದೂ ಸಮಾಜವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು. ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಶ್ರೀಕೃಷ್ಣ ಹುಟ್ಟಿದ ದಿನವೇ ವಿ.ಹಿಂ.ಪರಿಷತ್ ಸ್ಥಾಪನೆಯಾಯಿತು. ಶ್ರೀ ಕೃಷ್ಣ ಪರಮಾತ್ಮನಿಗೆ ದೊಡ್ಡ ಆರಾಧನೆ ಮಾಡದೆ ಕೇವಲ ಪ್ರೀತಿಸಿ, ಭಜಿಸಿದರೆ ಸಾಕು ಆತನ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕುವ ಮೂಲಕ ನಾವು ಪರಮಾತ್ಮನನ್ನು ಕಾಣುತ್ತಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ.ಹಿಂ.ಪ.ನ ಸೋಮವಾರಪೇಟೆ ಪ್ರಖಂಡದ ಅಧ್ಯಕ್ಷ ಎ.ಎಸ್.ಮಲ್ಲೇಶ್, ಪರಿಷದ್ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಚೌಡ್ಲು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ನೌಕರ ಹೆಚ್.ಹೆಚ್.ಹೂವಯ್ಯ ಹಾಜರಿದ್ದರು. ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಪ್ರಾರ್ಥಿಸಿದರು. ಜಿಲ್ಲಾ ಸತ್ಸಂಗ ಪ್ರಮುಖ್ ಪವಿತ್ರಾ ಶೇಷಾದ್ರಿ ನಿರೂಪಿಸಿದರು. ಪ್ರಖಂಡದ ದುರ್ಗಾವಾಹಿನಿ ಪ್ರಮುಖ್ ಭಾನುಮತಿ ಆದರ್ಶ್ ಸ್ವಾಗತಿಸಿದರು. ವಿಧಿ ಪ್ರಕೋಷ್ಠದ ಸಂಚಾಲಕ ವಕೀಲ ಹೆಮಂತ್ ವಂದಿಸಿದರು. 1 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ರಾಧೆಯರ ಛಧ್ಮವೇಷ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿ.ಹಿಂ.ಪ.ನ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಸಮಿತಿಯ ಪರಮೇಶ್ ಕೂತಿ, ತಾಲೂಕು ಸಮಿತಿಯ ಸಿ.ಎಸ್.ನಾಗರಾಜ್, ಮಾಜಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಇತರರು ಪಾಲ್ಗೊಂಡಿದ್ದರು.










