ವಿರಾಜಪೇಟೆ NEWS DESK ಸೆ.8 : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಸ್ಥಾಪಕ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಮತ್ತು ಕಿತ್ತಳೆ ನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕರಾದ ಕುವೇಂಡ ವೈ.ಹಂಝತುಲ್ಲಾ ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಅಕಾಡೆಮಿ ಅಧ್ಯಕ್ಷರಾದ ಯು. ಎಚ್. ಉಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುವೇಂಡ ವೈ. ಹಂಝತುಲ್ಲಾ ಅವರು, ಕಡಲ ತೀರದ ಶಿಕ್ಷಣ ಪ್ರೇಮಿ, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಂದ ರೂ.50000/- ಸಾವಿರ ನಗದು ಬಹುಮಾನವನ್ನು ಒಳಗೊಂಡ ಈ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಅಬೂಬಕ್ಕರ್ ಸಿದ್ದೀಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸ್ಟ್ಯಾನಿ ಜೋಕಿಂ ಆಳ್ವಾರಿಸ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಬಂಟ್ವಾಳ ಮೂಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಜಾಕ್ ಅನಂತಾಡಿ ಸೇರಿದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು, ಬ್ಯಾರಿ ಸಮುದಾಯದ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು. ಸಮಾರಂಭದ ನಂತರ ಕೊಡಗಿನಿಂದ ತೆರಳಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿ ನೇತೃತ್ವದ ಪ್ರಮುಖರ ನಿಯೋಗ ಗೌರವ ಪ್ರಶಸ್ತಿ ಪುರಸ್ಕೃತರಾದ ಕುವೇಂಡ ವೈ. ಹಂಝತುಲ್ಲಾ ಅವರಿಗೆ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಅಭಿನಂದಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸೂಫಿ ಹಾಜಿಯವರು, ಕುವೇಂಡ ವೈ. ಹಂಝತುಲ್ಲಾ ಅವರು ತಮ್ಮ ದೂರದೃಷ್ಟಿತ್ವದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ನನ್ನು ಕಳೆದ 46 ವರ್ಷಗಳ ಹಿಂದೆಯೇ ಸ್ಥಾಪನೆ ಮಾಡಿ ಸಮುದಾಯದ ಸಾಮಾಜಿಕ ಬೆಳವಣಿಗೆಗೆ ಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆತಿರುವುದು ಕೇವಲ ಸಮುದಾಯಕ್ಕೆ ಮಾತ್ರ ಅಲ್ಲ ಇಡೀ ಕೊಡಗು ಜಿಲ್ಲೆಗೆ ಅಭಿಮಾನ ತಂದಿದೆ ಎಂದು ಹೇಳಿದರು. ನಿಯೋಗದಲ್ಲಿ ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಹಿರಿಯ ನಿರ್ದೇಶಕರಾದ ಪುದಿಯತಂಡ ಹೆಚ್. ಸಂಸುದ್ದೀನ್, ಆಡಳಿತ ಮಂಡಳಿ ಪದಾಧಿಕಾರಿಗಳಾದ ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಪುದಿಯಾಣೆರ ಎಂ. ಹನೀಫ್, ದುದ್ದಿಯಂಡ ಹೆಚ್. ಮೊಯ್ದು ಹಾಜಿ, ಮಂದಮಾಡ ಎ. ಮುನೀರ್, ದುದ್ದಿಯಂಡ ಮಸೂಕ್ ಸೂಫಿ ಮೊದಲಾದವರಿದ್ದರು. 1988ರಲ್ಲಿ ಪತ್ರಿಕಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕುವೇಂಡ ವೈ. ಹಂಝತುಲ್ಲಾ ಅವರು, ಮೊದಲಿಗೆ ಬೆಂಗಳೂರಿನಲ್ಲಿ ಬ್ಯಾರಿ ಟೈಮ್ಸ್ ಎಂಬ ಬ್ಯಾರಿ ಬಾಷಾ ಪತ್ರಿಕೆಯನ್ನು ಆರಂಭಿಸಿ ಅದರ ಸ್ಥಾಪಕ ಸಂಪಾದಕರಾಗಿ ಆರು ವರ್ಷಗಳ ಕಾಲ ವೃತ್ತಿ ನಿರ್ವಹಿಸಿದ್ದರು. ಬಳಿಕ ಬೆಂಗಳೂರಿನಿಂದಲೇ ಕಿತ್ತಳೆ ನಾಡು ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿ ಇಂದಿನವರೆಗೂ ಅದರ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಬ್ಯಾರಿ ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್ ನಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರದಿಂದ ಮಾನ್ಯತೆ ಪಡೆದ ಹಿರಿಯ ಪತ್ರಕರ್ತರಾಗಿರುವ ಹಂಝತುಲ್ಲಾ, ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ವಿವಿಧ ಕೃತಿಗಳನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂಲತಃ ವಿರಾಜಪೇಟೆ ಸಮೀಪದ ಕೊಟ್ಟೋಳಿ (ಗುಂಡಿಕೆರೆ) ನಿವಾಸಿಯಾಗಿರುವ ಕೆ. ವೈ. ಹಂಝತುಲ್ಲಾ ಅವರು ದಿ. ಕುವೇಂಡ ಯೂಸುಫ್ ಹಾಜಿ ಮತ್ತು ದಿ.ನಫೀಸಾ ದಂಪತಿಯ ಪುತ್ರರಾಗಿದ್ದಾರೆ.