ವಿರಾಜಪೇಟೆ NEWS DESK ಸೆ.8 : ಗ್ರಾಮೀಣ ಭಾಗದ ಜನರು ಒಗ್ಗಟ್ಟಿನಿಂದ ಒಂದೆಡೆ ಸೇರಲು ಸಾರ್ವಜನಿಕ ಗಣೇಶೋತ್ಸವವು ವೇದಿಕೆಯಾಗಿದೆ ಎಂದು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರು ಅಭಿಪ್ರಾಯಪಟ್ಟರು. ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭೆಯನ್ನು ಅಸಾಧಾರಣವಾಗಿ ಪ್ರದರ್ಶಿಸುತ್ತಿದ್ದಾರೆ. ಮನುಷ್ಯನು ಏನನ್ನು ಬೇಕಾದರೂ ಹಣವನ್ನು ಬಳಸಿ ಪಡೆಯಬಹುದು ಆದರೇ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುವಂತಾಗಬೇಕು ಎಂದರು. ಗಣೇಶೋತ್ಸವದ ಆಚರಣೆಯು ಸಮಾಜದಲ್ಲಿ ಐಕ್ಯತೆ, ಸಾಮರಸ್ಯವನ್ನು ಮೂಡಿಸುತ್ತದೆ ಎಂದು ಹೇಳಿದರು. ಗ್ರಾಮೀಣ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಧನೆಯನ್ನು ತೋರುತ್ತಿರುವುದು ಗಮನಾರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಗ್ಗಳ ಶಾಲಾ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಸಮಾಜ ಸೇವೆಯಲ್ಲಿ ಬಿ. ಎಸ್. ವೀಣಾ ಶಶಿಧರ್, ಹೈನುಗಾರಿಕೆ ಯಲ್ಲಿ ಟಿ. ಎಸ್. ವಿಶ್ವನಾಥ್, ಸರ್ಕಾರಿ ಪ್ರೌಢ ಶಾಲೆ ಹೆಗ್ಗಳದ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಸಪ್ನಾ, ಎಸ್. ಮತ್ತು ದೆಹಲಿಯ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಗ್ರಾಮದ ರಕ್ಷಿತಾ ಬಿ. ಎಸ್., ಪ್ರಾಂಶುಪಾಲೆ ತಾತಂಡ ಜ್ಯೋತಿ ರವರನ್ನು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಶಾಲಾ ಮಕ್ಕಳು ಹಾಗೂ ಗಣಪತಿ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಸಂತೋಷ್ ರವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಗೌರವ ಅಧ್ಯಕ್ಷರಾದ ಡಾ. ರಾಮಕೃಷ್ಣ, ಕಾರ್ಯದರ್ಶಿಗಳಾದ ಬಿ. ಎನ್. ಶಾಂತಿಭೂಷಣ್ ರವರು ಉಪಸ್ಥಿತರಿದ್ದರು. ಸುನಿಲ್ ಬಿ.ಬಿ. ಸ್ವಾಗತಿಸಿ, ಜ್ಯೋತಿ ಸಂತೋಷ್ ನಿರೂಪಿಸಿ, ಸೌಮ್ಯ ಶೈಲೇಶ್ ರವರು ವಂದಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.