ಮಡಿಕೇರಿ NEWS DESK ಸೆ.8 : ನಾಪೋಕ್ಲು ಕೊಡವ ಸಮಾಜ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಒತ್ತಾಯಿಸಿ ಕೊಡವ ಸಮಾಜದ ಪ್ರಮುಖರು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆ ಹಾಗೂ ಕೊಡವ ಸಮಾಜ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಕೊಡವ ಸಮಾಜದಲ್ಲಿ ವಿವಾಹ ಮತ್ತಿತರ ಕಾರ್ಯಕ್ರಮಗಳು ನಡೆಯುವಾಗ ಅತಿ ಹೆಚ್ಚಿನ ವಾಹನಗಳು ಮತ್ತು ಸಾವಿರಾರು ಜನರ ಓಡಾಟವಿರುತ್ತದೆ. ಈ ರಸ್ತೆಯ ಎರಡೂ ಬದಿಯಲ್ಲಿ ಸುಮಾರು ಅರ್ಧ ಕಿ.ಮೀ ದೂರದವರೆಗೂ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲದೆ ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕರುಗಳ ನಡುವೆ ಕಲಹ ಏರ್ಪಡುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಒಂದೇ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಠಾಣಾಧಿಕಾರಿಗಳ ಬಳಿ ಕೊಡವ ಸಮಾಜದ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಮನವಿ ಪತ್ರ ಸಲ್ಲಿಸುವ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಜಂಟಿ ಕಾರ್ಯದರ್ಶಿ ಮಾಚೇಟಿರ ಕುಶಾಲಪ್ಪ (ಕುಶು) ಹಾಗೂ ನಿರ್ದೇಶಕರುಗಳು ಹಾಜರಿದ್ದರು.