



ಮಡಿಕೇರಿ ಸೆ.12 NEWS DESK : ದಿ. ವಿ.ಟಿ.ಶ್ರೀನಿವಾಸ್ ಸಂಗೀತ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಕಲಾವಿದರಾಗಿದ್ದು, ತಬಲ ಕ್ಯಾಸಿಯೋ ವಾದನೆಗಳಲ್ಲಿ ಪರಿಣಿತರಾಗಿದ್ದರು ಯಾವುದೇ ರಾಗವನ್ನು ನಿಮಿಷ ಮಾತ್ರದಲ್ಲಿ ಕ್ಯಾಸಿಯೋದಲ್ಲಿ ಅಳವಡಿಸುವ ಕಲೆ ಹೊಂದಿದ್ದರು ಎಂದು ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷ ಚೇಂದಿರ ನಿರ್ಮಲಾ ಬೋಪಣ್ಣ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಗೋಣಿಕೊಪ್ಪಲು ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಕಲಾವಿದ ದಿ.ಶ್ರೀನಿವಾಸ್ ನೆನಪು ನುಡಿ ಮತ್ತು ಗಾನ ನಮನ ಕಾರ್ಯಕ್ರಮವನ್ನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು ಎನ್ನುವ ಗಾಯನದೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಅಜಾತಶತ್ರುವಾಗಿದ್ದ ಅವರು ಸಾವಿರಾರು ಸಂಗೀತ ಮತ್ತು ನೃತ್ಯ ಶಿಷ್ಯರನ್ನು ಹೊಂದಿದ್ದು ಅವರ ನಿಧನವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ವಿ.ಟಿ.ಶ್ರೀನಿವಾಸ್ ಅವರು ಅತ್ಯುತ್ತಮ ಕಲಾವಿದರಾಗಿದ್ದು, ಸುಮಾರು 40 ವರ್ಷಗಳಿಂದ ತಾವು ಅಧ್ಯಕ್ಷರಾಗಿದ್ದ ಸೃಷ್ಟಿ ನಾಟಕ ಸಂಸ್ಥೆಯಲ್ಲಿ ನಾಟಕಕ್ಕೆ ಸಂಗೀತ ನೀಡುತ್ತಿದ್ದರು. ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಲ್ಲೂಕಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಾನಲ್ ಕೂರ್ಗ್‌ನ ಸಂಪಾದಕ ಶ್ರೀಧರ ನೆಲ್ಲಿತಾಯ ಮಾತನಾಡಿ, ಕುಟ್ಟದಿಂದ ಕೊಡ್ಲಿಪೇಟೆಯವರೆಗೆ ಎಲ್ಲಿಯೇ ಕಾರ್ಯಕ್ರಮ ನಡೆದರೂ ಶ್ರೀನಿವಾಸ್ ಅವರ ಉಪಸ್ಥಿತಿ ಕಾಣುತ್ತಿತ್ತು. ಅವರ ತಂಡದ ಸಂಗೀತ ಅಥವಾ ನೃತ್ಯ ಇಲ್ಲದೆ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನೃತ್ಯ ಮತ್ತು ಸಂಗೀತ ಅಭ್ಯಾಸ ಮಾಡಿ ತಾವೇ ಶ್ರೀನಿವಾಸ ಸಂಗೀತ ನೃತ್ಯ ಶಾಲೆ ಪ್ರಾರಂಭ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ. ಕೆ.ಕೆ.ಶಿವಪ್ಪ ಮಾತನಾಡಿ ವಿ.ಟಿ.ಶ್ರೀನಿವಾಸ್ ಮರೆಯಲಾಗದ ಕಲಾವಿದ ಅವರ ಕ್ಯಾಸಿಯೋ ಪರಿಣಿತಿ ಇನ್ನೊಬ್ಬರಿಗೆ ಸಾಧ್ಯವಿಲ್ಲ ಎಂದರು. ಶ್ರೀನಿವಾಸ್ ಅವರ ಶಿಷ್ಯೆ ಹಿತೈಷಿಣಿ ಮಾತನಾಡಿ, ತಾವು ಒಂದನೇ ತರಗತಿಯಿಂದ ಡಿಗ್ರಿವರೆಗೆ ಶ್ರೀನಿವಾಸ್ ಅವರಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅವರು ಕಲಿಸುವ ರೀತಿ ತಾನು ಇಂದಯ ಉತ್ತಮ ನೃತ್ಯಗಾತಿಯಾಗಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಕಲಾವಿದ ದಿ. ಶ್ರೀನಿವಾಸ್ ಮತ್ತು ತಾನು ಬಾಲ್ಯ ಸ್ನೇಹಿತರು ಇಬ್ಬರು ಒಂದೇ ಶಾಲೆಯಲ್ಲಿ ಓದಿದವರು. ಬಹುಮುಖ ಪ್ರತಿಭೆಯ ಶ್ರೀನಿವಾಸ್ ಕೇವಲ ನೃತ್ಯ ಮತ್ತು ಸಂಘ ಸಂಗೀತ ಶಿಕ್ಷಕರಲ್ಲ ಆತ ಯೋಗಪಟು, ಕವಿ ಹಾಗೂ ಹಾಸ್ಯಪ್ರಿಯರು ಆಗಿದ್ದರು. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಅಂತಹ ಒಂದು ಸಂಗೀತ ಶಿಕ್ಷಕರನ್ನು ಕಳೆದುಕೊಂಡಿದ್ದು ಕೊಡಗಿನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದರು. ಕಾರ್ಯಕ್ರಮದಲ್ಲಿ ಶ್ರೀಮಂಗಲ ಕ.ಸಾ.ಪ ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಬಾಳೆಲೆ ಹೋಬಳಿ ಕಾರ್ಯದರ್ಶಿ ಪಿ.ಜಿ.ಜಾನಕಿ, ದಿ.ವಿ.ಟಿ.ಶ್ರೀನಿವಾಸ್ ಅವರ ಪತ್ನಿ ಶಾಂತ ಶ್ರೀನಿವಾಸ್, ಮಕ್ಕಳಾದ ಪ್ರಮೋದ್ ಕುಮಾರ್, ನವೀನ್ ಕುಮಾರ್, ಸಹೋದರ ವಿ.ಟಿ.ಮಂಜುನಾಥ್, ಗಿರಿಜಾ ಮಂಜುನಾಥ್, ಬಾವಾ ಮಾಲ್ದಾರೆ, ಪುರುಷೋತ್ತಮ್, ಸಾಹಿತಿ ಟಿ.ಆರ್. ವಿನೋದ್, ಸಂಧ್ಯಾ ಕಾಮತ್, ಶಾಂಭವಿ ಕಾಮತ್, ಚಂದನಾ ಮಂಜುನಾಥ್, ನಿರ್ಮಲ ಬೋಪಣ್ಣ, ಅಧ್ಯಾಪಕರುಗಳಾದ ಕೃಷ್ಣ ಚೈತನ್ಯ, ಟಿ.ಗಿಡ್ಡಯ್ಯ, ಈಶ, ಗಿರೀಶ, ನವೀನ, ರಶ್ಮಿ, ಸಬೀನಾ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು. ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲ್ಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ ನಿರೂಪಿಸಿದರು. ಪೊನ್ನಂಪೇಟೆ ಹೋಬಳಿ ಗೌರವ ಕೋಶಾಧಿಕಾರಿ ಚಂದನ್ ಕಾಮತ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದಿ. ವಿ.ಟಿ.ಶ್ರೀನಿವಾಸ್ ಸ್ನೇಹಿತರಾದ ಆಕಾಶವಾಣಿ ಕಲಾವಿದ ಬಿ.ಎ.ಗಣೇಶ್, ವಿದ್ವಾನ್ ದಿಲಿ ಕುಮಾರ್, ಕೆ.ಚಂದ್ರಶೇಖರ್, ತಬಲವಾದಕ ಚಂದ್ರು, ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಇನ್ನಿತರರು ಹಾಡು ಹಾಡುವ ಮೂಲಕ ಗಾನ ನಮನ ನಡೆಸಿಕೊಟ್ಟರು. ಕಲಾವಿದ ದಿವಂಗತ ಶ್ರೀನಿವಾಸ್ ರವರ ಜ್ಞಾಪಕಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ ನಡೆಯಿತು. ವಿದ್ಯಾರ್ಥಿನಿ ಮಂಜುಳಾ ಪ್ರಥಮ, ತನ್ಮಯ ದ್ವಿತೀಯ, ಅಮೂಲ್ಯ ತೃತೀಯ ಬಹುಮಾನ ಪಡೆದುಕೊಂಡರು. ಮೊದಲ ಬಹುಮಾನ ಪಡೆದ ಮಂಜುಳ ವಿ.ಟಿ.ಶ್ರೀನಿವಾಸ್ ಶಿಷ್ಯೆ.