ಸುಂಟಿಕೊಪ್ಪ ಸೆ.17 NEWS DESK : ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ 39ನೇ ವರ್ಷದ ಗೌರಿ ಗಣೇಶ ವಿಸರ್ಜನಾಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಸರ್ಜನೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆಯಿಂದಲೇ ನಿತ್ಯ ಪೂಜೆ, ಗಣಪತಿ ಹೋಮ ಹಾಗೂ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನೆರವೇರಿತು. ಸಂಜೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ಡಿಜೆ ಸಂಗೀತ, ಗೊಂಬೆ ಕುಣಿತ, ಡೊಳ್ಳು ಕುಣಿತದೊಂದಿಗೆ ಆರಂಭಗೊಂಡ ಶೋಭಯಾತ್ರೆಯು ಮೆಟ್ನಳ್ಳ ಸರ್ಕಲ್ ವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಮುಖ್ಯ ರಸ್ತೆಯಲ್ಲಿ ಸಾಗಿ ರಾತ್ರಿ ದಾಸಂಡ ರಮೇಶ್ ಚಂಗಪ್ಪ ಅವರ ಜಾಗದಲ್ಲಿರುವ ಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಪ್ರಮುಖರಾದ ದಾಸಂಡ ರಮೇಶ್ ಚಂಗಪ್ಪ, ದಾಸಂಡ ಜಗದೀಶ್, ದಾಸಂಡ ರಂಜನ್, ಮಹೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು. ಮುಂಜಾಗ್ರತಾ ಕ್ರಮವಾಗಿ ಸುಂಟಿಕೊಪ್ಪ ಪೊಲೀಸ್ ಠಾಣಾವತಿಯಿಂದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.