ಸಿದ್ದಾಪುರ NEWS DESK ಸೆ.23 : ತೋಟದಲ್ಲಿ ಬೀಡುಬಿಟ್ಟಿದ್ದ ಸುಮಾರು 15 ಕಾಡಾನೆಗಳನ್ನು ಕಾರ್ಮಿಕರೇ ಕಾಡಿಗಟ್ಟಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟವೊಂದರಲ್ಲಿ ನಡೆದಿದೆ. ಪ್ರತಿದಿನದಂತೆ ಇಂದು ಕೂಡ ಕೆಲಸಕ್ಕೆಂದು ಬಂದ ಕಾರ್ಮಿಕರಿಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿತ್ತು. ತೋಟದೊಳಗಿದ್ದ ಕಾಡಾನೆಗಳನ್ನು ಹೇಗಾದರೂ ಮಾಡಿ ಓಡಿಸಬೇಕೆಂದು ಧೈರ್ಯ ಮಾಡಿಕೊಂಡ ಕಾರ್ಮಿಕರು ಮರವೊಂದರ ಮೇಲೆ ಹತ್ತಿ ಕರ್ಕಷವಾಗಿ ಕಿರುಚಿದರು, ಶಬ್ಧ ಮಾಡಿದರು, ಆನೆಗಳನ್ನು ಬೆದರಿಸಿದರು. ಕಾಫಿ ತೋಟದಿಂದ ಚಿಕ್ಕನಹಳ್ಳಿ ಮಾರ್ಗವಾಗಿ ಒಂದು ಕಿಲೋಮೀಟರ್ ವರೆಗೆ ಆನೆಗಳನ್ನು ಓಡಿಸಿ ಅರಣ್ಯ ಸೇರುವಂತೆ ಮಾಡಿದರು. (ವರದಿ : ಕೃಷ್ಣ ಸಿದ್ದಾಪುರ)