ಮಡಿಕೇರಿ, NEWS DESK ಅ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಗಳಲ್ಲಿ ಒಂದಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಸಾಹಿತಿ ಡಾ. ಕೆ.ಪಿ. ಲಲಿತ (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರು ರಚಿಸಿರುವ ‘ಕೊಡಗಿನ ಜಾನಪದ ಕಥೆಗಳು’ ಕೃತಿ ಆಯ್ಕೆಯಾಗಿದೆ.
ಕೊಡಗಿನ ಮಹಿಳಾ ಲೇಖಕಿಯರು ಪ್ರಕಟಿಸಿರುವ ಉತ್ತಮ ಕೃತಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಉದ್ದೇಶದಿಂದ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಇದುವರೆಗೆ 23 ಮಂದಿ ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2026-27ನೇ ಸಾಲಿನ 24ನೇ ಪ್ರಶಸ್ತಿಗಾಗಿ ಒಟ್ಟು 9 ಲೇಖಕಿಯರು ತಮ್ಮ ಕೃತಿಗಳನ್ನು ಸಲ್ಲಿಸಿದ್ದರು.
ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳನ್ನು ತೀರ್ಪುಗಾರರನ್ನಾಗಿ ನೇಮಿಸಲಾಗಿದ್ದು, ಅವರು ಸಲ್ಲಿಕೆಯಾಗಿದ್ದ ಎಲ್ಲ ಕೃತಿಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಿದ್ದರು. ತೀರ್ಪುಗಾರರು ಕಳುಹಿಸಿದ ಅಂಕಪಟ್ಟಿಗಳನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಪರಿಶೀಲಿಸಿ, ಅಂಕಗಳನ್ನು ಕ್ರೋಢೀಕರಿಸಿದಾಗ ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಯು ಅತ್ಯಧಿಕ ಅಂಕಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ
ಡಾ. ಕೆ.ಪಿ. ಲಲಿತ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡಗಿನಲ್ಲಿ ಪೂರ್ಣಗೊಳಿಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯೊಂದಿಗೆ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ಅವರು, ಕೊಡಗಿನ ಸ್ಥಳನಾಮಗಳಿಗೆ ಸಂಬಂಧಿಸಿದ ಸಂಶೋಧನಾ ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇವರ ಸಂಶೋಧನಾ ಮಹಾಪ್ರಬಂಧವನ್ನು ಸಾಹಿತ್ಯ ಅಕಾಡೆಮಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ‘ವಿವಕ್ಷ’, ‘ವಿವೇಚನೆ’, ‘ಜೀವಂತ ಪಳೆಯುಳಿಕೆಗಳ ಕುರಿತು’, ‘ಕೊಡಗಿನ ಭಾಷೆ ಮತ್ತು ಸಂಸ್ಕೃತಿ’, ‘ಕೊಡಗಿನ ಜನಪದ ಕಥೆಗಳು’, ‘ಶೋಧನೆಯ ಹಾದಿಯಲ್ಲಿ’ ಸೇರಿದಂತೆ ಹಲವು ಸಂಶೋಧನಾ ಕೃತಿಗಳನ್ನು ಅವರು ರಚಿಸಿದ್ದಾರೆ. ‘ಊರೋರ್ಮೆ’ ಎಂಬ ಸಂಶೋಧನಾ ಲೇಖನಗಳ ಸಂಕಲನವನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ.
ಕೊಡಗಿನ ಇತಿಹಾಸ ಮತ್ತು ಜಾನಪದ ಹಿನ್ನೆಲೆಯನ್ನು ಒಳಗೊಂಡ ಅವರ ‘ಪೊಮ್ಮೋದೀರ ಪೊನ್ನಪ್ಪ’ ನಾಟಕ ಬೆಂಗಳೂರಿನ ರಂಗಶಂಕರದಲ್ಲಿ 11 ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡು ಮೆಚ್ಚುಗೆ ಪಡೆದಿದೆ. ನಾಟಕವು ಇಂಗ್ಲಿಷ್‌ಗೆ ಅನುವಾದಗೊಂಡು ಅಮೆರಿಕದ ನ್ಯೂಯಾರ್ಕ್ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್‌ನ ಕಲ್ಚರಲ್ ಹಬ್‌ನಲ್ಲಿಯೂ ಪ್ರದರ್ಶನಗೊಂಡಿದೆ.
ಅಂತರರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ 29 ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಅವರ ಸಂಶೋಧನಾ ಕಾರ್ಯಕ್ಕೆ ಭಾರತ ಸರ್ಕಾರದ ನೀತಿ ಆಯೋಗ ನೀಡುವ ‘ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ’ ಲಭಿಸಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವ ಅವರು ಭಾಷಾಂತರ, ಸಂಶೋಧನೆ ಹಾಗೂ ಜಾನಪದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಡಾ. ಲಲಿತ ಅವರು ಬೆಂಗಳೂರಿನ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಸಾರಾಂಗದ ಗೌರವ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸುರೈ ಉಪಸ್ಥಿತರಿದ್ದರು. ಸಭೆಯಲ್ಲಿ ತೀರ್ಪುಗಾರರ ಅಂಕಗಳನ್ನು ಕ್ರೋಢೀಕರಿಸಿ ಪ್ರಶಸ್ತಿ ವಿಜೇತರನ್ನು ಅಂತಿಮಗೊಳಿಸಲಾಯಿತು.








