ಸುಂಟಿಕೊಪ್ಪ ಸೆ.24 NEWS DESK : ಸರ್ಕಾರ ಮಹಿಳೆಯರ ರಕ್ಷಣೆಗಾಗಿ ಮತ್ತು ಸುರಕ್ಷತೆಯ ದಿಸೆಯಲ್ಲಿ ಹಲವು ಕಠಿಣ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಕಾನೂನಿನ ಮಾಹಿತಿಯನ್ನು ಪಡೆದುಕೊಂಡು ಇತರರಿಗೆ ತಿಳಿಸುವಂತೆ ಠಾಣಾಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ಬೈಲ್ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕಾನ್ಬೈಲ್ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಮಹಿಳೆಯರಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ವಾಹನಗಳನ್ನು ಚಲಾಯಿಸುವಾಗ ವಾಹನದ ಪರವನಾಗಿ ದಾಖಲಾತಿಗಳನ್ನು ವಾಹನದಲ್ಲಿರಿಸಿಕೊಂಡಿರಬೇಕು, ಸಂಚಾರಿ ನಿಯಮವನ್ನು ಪಾಲಿಸಬೇಕು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡಬೇಡಿ ತಪ್ಪಿದಲ್ಲಿ ಪೋಷಕರಿಗೆ ದಂಡ ಹಾಗೂ ಜೈಲು ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಮೇಲೆ ದೌರ್ಜನ್ಯ, ಇನ್ನಿತರ ಕಿರುಕುಳ ನೀಡುವುದು ಸಹ ಅಪರಾಧವಾಗಿದೆ. ಅದನ್ನು ತಡೆಯುವ ದಿಸೆಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಚಂದ್ರಶೇಖರ್ ಹೇಳಿದರು. ಸಮನ್ವಯಧಿಕಾರಿ ಮಾಲಿನಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತರಬೇತಿ ಹಾಗೂ ಮಾಹಿತಿಯನ್ನು ನೀಡಿದರು. ಕೃಷಿಯಾಧಿಕಾರಿ ರಾಕೇಶ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದ್ದರಿಂದ ನಾವು ವೈಯಕ್ತಿಕ ಬೆಳವಣಿಗೆಯನ್ನು ಕಂಡುಕೊಳ್ಳಬಹುದಾಗಿದೆ. ಭೂಮಿಯ ಫಲವತ್ತತೆ ಬಗ್ಗೆ ನಮಗೆ ಅರಿವು ಮುಖ್ಯ. ಕೃಷಿಚಟುವಟಿಕೆ ನಡೆಸುವುದ್ದರಿಂದ ಲಾಭಗಳಿಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್ಬೈಲ್ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಪುಷ್ಟಲತಾ ಹಾಗೂ ಸೇವಾ ಪ್ರತಿನಿಧಿ ಯಶೋಧ ಇದ್ದರು.