ಮಡಿಕೇರಿ ಸೆ.25 NEWS DESK : ಮೇಲ್ನೋಟಕ್ಕೆ ನಮಗೆ ಪರಿಸರ ತನ್ನ ವೈಭವ ಕಳೆದು ಕೊಂಡಿದೆ ಎಂದು ಕಾಣುವುದಿಲ್ಲ. ಏಕೆಂದರೆ ನಾವು ನೋಡುವಾಗ ಎಲ್ಲ ಕಡೆ ಹಸಿರು ಹಾಗೆ ಕಾಣುತ್ತದೆ. ನಾವು ಪ್ರಕೃತಿಯ ಒಳ ಹೊಕ್ಕು ನೋಡಿದಾಗ ಮಾತ್ರ ನಮಗೆ ಪ್ರಕೃತಿಯ ನಾಶದ ಅರಿವಾಗುತ್ತದೆ. ಪ್ರಕೃತಿಯಲ್ಲಿ ಏನು ಇಲ್ಲ. ನಾವು ನಮಗೆ ಅರಿವಾದಲ್ಲಿಂದ ಗಮನಿಸಿದರೆ ಸಾಕು ಪ್ರತಿ ಸಿಸೆನ್‍ನಲ್ಲಿ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತ ಇದ್ದ ಹಣ್ಣುಗಳು, ಕಾಡು ಹೂವುಗಳು, ಅನೇಕ ರೀತಿಯ ಸಣ್ಣ ಸಣ್ಣ ಸಸ್ಯಗಳು, ಗಿಡಗಳು, ಕಾಡು ಜಾತಿಯ ಮರಗಳು ಇತಿಹಾಸದ ಪುಟ ಸೇರಿವೆ. ಸಾವಿರಾರು ಸಂಖ್ಯೆಯ ಮದ್ದಿನ ಗಿಡಗಳು ಕಣ್ಮರೆಯಾಗಿದೆ. ಅದೇ ರೀತಿ ಅನೇಕ ಸಣ್ಣ ಸಣ್ಣ ಪ್ರಾಣಿ ಪಕ್ಷಿಗಳು, ಜಲಚರಗಳು ಇಂದು ಕಾಣೆಯಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಕೃಷಿಗಾಗಿ ಅರಣ್ಯ ಒತ್ತುವರಿ, ಅವಶ್ಯಕತೆಗಿಂತ ಹೆಚ್ಚಾಗಿ ರಾಸಾಯನಗಳ ಬಳಕೆ, ಅಣೆಕಟ್ಟುಗಳ ನಿರ್ಮಾಣ, ಕಾಲುವೆಗಳ ಒತ್ತುವರಿ, ನಗರಿಕರಣ, ಮೊಬೈಲ್ ತರಂಗಂತರ ಹೀಗೆ ಹಲವು ಕಾರಣ ಗಳೊಂದಿಗೆ ಪ್ರವಾಸೋದ್ಯಮವು ಒಂದು ಕಾರಣ. ಜನ ಪ್ರವಾಸೋದ್ಯಮಕ್ಕೆ ರತ್ನ ಕಂಬಳಿ ಹಾಸಿದ್ದರೋ ಅಲ್ಲಿಂದ ಪರಿಸರ ಹೆಚ್ಚಾಗಿ ನಾಶವಾಗತೊಡಗಿತು. ಏಕೆಂದರೆ ಅದು ಸ್ಥಳೀಯರ ಉಪ ಕಸುಬು ಆಗಬೇಕಿತ್ತು. ಆದರೆ ಅದು ಬಂಡವಾಳಶಾಹಿ ಹೂಡಿಕೆಗೆ ದಾರಿಯಾಯಿತು. ಪರಿಣಾಮ ಕೃಷಿ ಭೂಮಿ ವಾಣಿಜ್ಯೇತರ ಉದ್ದೇಶಕ್ಕೆ ಬಳಕೆಯಾಗತೊಡಗಿತು. ಸ್ಯಾಮಾನವಾಗಿ ಜನರು ಮಾತಾಡುವುದನ್ನು ಕೇಳಿದಿರ… ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಜಾಸ್ತಿ, ಚಳಿ ಜಾಸ್ತಿ, ಸೆಕೆ ಜಾಸ್ತಿ ಅಂತ ಮಾತಾಡುತ್ತಾರೆಯೇ ಹೊರತು ಯಾರ ಹತ್ತಿರ ನಿಖರವಾದ ಮಾಹಿತಿ ಇಲ್ಲ. ರೈತರು ಪರಿಸರದ ಬಗ್ಗೆ ಆಧ್ಯಾಯನ ನಡೆಸಬೇಕು. ಅವರು ಪರಿಸರದ ಡಾಕ್ಟರ್ ಆಗಬೇಕು. ಆದರೆ ಯಾರು ಆ ಬಗ್ಗೆ ತಲೆ ಕೆಡಿಸೊದಿಲ್ಲ. ಅವರಿಗೆ ನಾನು ಅಷ್ಟು ಚೀಲ ಕಾಫಿ, ಒಳ್ಳೆ ಮೆಣಸು, ಅಡಿಕೆ, ಭತ್ತ ಬೆಳೆದೇ ಎಂದು ಹೇಳುವುದನ್ನು ಬಿಟ್ಟರೇ ಬೇರೆ ಏನು ಬೇಡ. ಕಳೆದ 15 ವರ್ಷದಿಂದ ನಾವು ಪರಿಸರದ ಹಾಗೂ ವಾತಾವರಣದಲ್ಲಿ ಏರುಪೇರು ಉಂಟಾಗುತ್ತಾ ಇರುವುದನ್ನು ನಾವು ಗಮನಿಸಿದರೆ ಮಡಿಕೇರಿಯನ್ನೇ ಗಮನಿಸಿ ತಾಪಮಾನದಲ್ಲಿ ಎಷ್ಟು ವ್ಯತ್ಯಾಸವಾಗಿದೆ. ನಾವು ಸಣ್ಣವರಾಗಿದ್ದಾಗ ಬೇಸಿಗೆಯಲ್ಲೂ ಕಂಬಳಿ ಇಲ್ಲದೇ ಮಲಗುತಿರಲಿಲ್ಲ. ಈಗ ಮಳೆಗಾಲ ಬಿಟ್ಟರೆ ಬೇರೆ ಎಲ್ಲಾ ಕಾಲದಲ್ಲಿ ಫ್ಯಾನ್ ಬೇಕು. ಇನ್ನು ಪ್ಲಾಸ್ಟಿಕ್ ಬಳಕೆ ಪರಿಸರದ ಇನೊಂದು ಬಹು ದೊಡ್ಡ ಸಮಸ್ಯೆ. ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಲು ಸರ್ಕಾರ (ಸರ್ಕಾರವೇ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರುವುದು ಪುನಃ ಅವರೇ ಉತ್ಪಾದಿಸಲು ಅನುಮತಿ ನೀಡುವುದು ವಿಪರ್ಯಾಸ) ಸಂಘ ಸಂಸ್ಥೆಗಳು ಎಷ್ಟೇ ಪ್ರಯತ್ನ ಪಟ್ಟರೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ವಿದ್ಯಾವಂತರೇ ತಪ್ಪು ಮಾಡುತ್ತಿರುವುದು ಸಮಾಜದ ದೊಡ್ಡ ದುರಂತ. ಇವರೇ ಕಸವನ್ನು ಎಲ್ಲಂದ್ರೆ ಅಲ್ಲಿ ಬಿಸಾಕುವುದು. ಇನ್ನು ಕಸ ವಿಲೇವರಿಯು ಕೂಡ ನಗರೀಕರಣದ ಬೆಳವಣಿಗೆಯಿಂದ ದೊಡ್ಡ ಸಮಸ್ಯೆಯಾಗಿದೆ. ಕಸದ ವೈಜ್ಞಾನಿಕ ವಿಲೇವಾರಿ ಮಾರ್ಗಗಳು ಇನ್ನು ಅಭಿವೃದ್ಧಿ ಹೊಂದಿಲ್ಲ. ಅನೇಕ ವರ್ಷಗಳಿಂದ ಭೂವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಾ ಬಂದಿದ್ದಾರೆ. ಮುಂದೆ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ. ಅದು ನಿಜವಾಗುವ ಕಾಲ ಕೂಡಿ ಬರುವ ಎಲ್ಲಾ ಸಾಧ್ಯತೆ ಕಂಡು ಬರುತ್ತಾ ಇದೆ. ನಾವು ಎಷ್ಟು ಸಾಧ್ಯವೂ ಅಷ್ಟು ಆಳದಿಂದ ಭೂಮಿಯಿಂದ ನೀರನ್ನು ಬಗೆಯಲಾಯಿತು. ಮೊದಲು 200 ರಿಂದ 300 ಅಡಿಗೆ ನೀರು ಸಿಗುತ್ತಾ ಇತ್ತು. ಈಗ ಅದು 1000 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ರಾಜ್ಯದಲ್ಲಿ ಅಂದಾಜು 36000 ಕೆರೆಗಳಿತ್ತು. ಸೂಕ್ತವಾದ ನಿರ್ವಹಣೆ ಇಲ್ಲದೇ ಹಾಗೂ ಅತಿಕ್ರಮಣಗಳಿಂದ ಇಂದು ಎಲ್ಲಾ ಕೆರೆಗಳು ನಾಶವಾದವು. ಇಂದು ಬೆಂಗಳೂರಿನ ಬಹುತೇಕ ಲೇಔಟ್‍ಗಳು ಮೊದಲು ಕೆರೆಗಳಾಗಿದ್ದವು. ಈ ವರ್ಷದ ಬೇಸಿಗೆಯಲ್ಲಿನ ಪರಿಸ್ಥಿತಿಯಿಂದ ಸರ್ಕಾರ ಮತ್ತು ಕೆಲವು ಸಂಘಗಳು ಕೆರೆಗಳ ಪುನರ್ ನಿರ್ಮಾಣ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ 36 ಕೆರೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಕೈಗೆತ್ತಿ ಗೊಂಡಿದೆ. ಪ್ರಾಚೀನ ಕಾಲದಲ್ಲಿ ಒಂದು ಊರು ನಿರ್ಮಾಣ ಮಾಡಬೇಕಾದ್ರೆ ಊರಿಗೊಂದು ವನ, ಕೆರೆ, ಒಂದು ಗೋಮಾಳ, ಸ್ವಲ್ಪ ಖಾಲಿ ಜಾಗ ಮುಂದಾಲೋಚನೆ ಇತ್ತು. ನೀವು ಬೆಂಗಳೂರನ್ನೇ ನೋಡಿ 360ಕ್ಕೂ ಹೆಚ್ಚು ಕೆರೆಗಳು ಇತ್ತು. ಈಗ 36 ಕೆರೆಗಳಿಲ್ಲ. ಇಂದು ಕೆರೆ, ಬಾವಿ ಮುಚ್ಚಿ ಲೇಔಟ್ ನಿರ್ಮಾಣ ಮಾಡುತ್ತಾರೆ. ಅದಕ್ಕೆ ಸರಕಾರವೇ ಬೆಂಬಲ. ಈಗಾಗಲೇ 80ರಷ್ಟು ನೀರಿನ ಮೂಲಗಳು ನಾಶವಾಗಿದೆ. ಪಟ್ಟಣದ ಬಳಿಯಿರುವ ಗದ್ದೆಗಳು ಬಹುತೇಕ ವಾಣಿಜ್ಯ ಚಟುವಟಿಕೆಗಳಿಗೆ ಪರಿವರ್ತನೆ ಆಗಿದೆ. ಹಳ್ಳಿಗಳಲ್ಲಿ ಎಲ್ಲಾ ಗದ್ದೆಗಳು ಹಡಲು ಬಿಡಲಾಗಿದೆ. ಅದಕ್ಕೆ ವಿವಿಧ ಕಾರಣಗಳಿವೆ. ನಾವೇ ಜಲಮೂಲಗಳ ನಾಶ ಮಾಡಿ ಪುನಃ ಸರ್ಕಾರವೇ ಮಳೆ ಕೊಯ್ಲು ಮಾಡಲು ಕರೆ ನೀಡುವುದು. ಇದರ ಪರಿಣಾಮ ಮುಂದಿನ ದಿನಗಲೂ ಭೀಕರವಾಗಿರುತ್ತದೆ. ಪರಿಸರದ ನಾಶಕ್ಕೆ ನೇರವಾಗಿ ನಾನೇ ಹೊಣೆ. ನಾನು ಇನೊಬ್ಬರನ್ನು ದೂರುವುದು ತಪ್ಪು. ನಾನು ಸರಿ ಇದ್ದರೆ ಸರ್ಕಾರ ಸರಿ ಇರುತ್ತದೆ. ಅಧಿಕಾರಿಗಳು ಸರಿ ಇರುತ್ತಾರೆ. ನಮ್ಮಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಳುವ, ತಿದ್ದಿ ಕೊಳ್ಳುವ, ಪ್ರಶ್ನೆ ಮಾಡುವ ಗುಣಗಳು ಇಲ್ಲ. ಅನೇಕ ಜನರು, ಸಂಘಟನೆಗಳು ಪರಿಸರದ ಬಗ್ಗೆ ಹೋರಾಟ ನಡೆಸಿದ್ದಾರೆ. ವನ್ಯಜೀವಿಗಳ ಬಗ್ಗೆ ಕಾಳಜಿ ತೋರಿದ್ದಾರೆ. ಜನರಲ್ಲಿ ಅಭಿರುಚಿ ಮೂಡಿಸಲು ಪ್ರಾಮಾಣಿಕ ಹೋರಾಟ ಮಾಡಿದ ಅನೇಕ ಜನರಿದ್ದಾರೆ. ಆದರೆ ಅದು ಜನರ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿಲ್ಲ. ನಮ್ಮ ಸಮಾಜದಲ್ಲಿ ಪರಿಸರದ ಬಗ್ಗೆ ಜನರಿಗೆ ಕಾಳಜಿ ಇಲ್ಲ. ಜನರಿಗೆ ಅದು ಅರ್ಥವಾಗಬೇಕು. ಇಂದು ನಾವು ಬದುಕಿದರೆ ಸಾಲದು ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕು. ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಪರಿಸರ ರಕ್ಷಣೆ ಮಾಡಲು ಸರಕಾರ ಎಲ್ಲಾ ಇಲಾಖೆಗಳನ್ನು ರಚನೆ ಮಾಡಿದ್ದಾರೆ. ಅದು ಒಂದು ರೀತಿಯಲ್ಲಿ ಪ್ರಯೋಜನ ಇಲ್ಲ. ಏಕೆಂದರೆ ಅವುಗಳ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಜಾಸ್ತಿ. ಅರಣ್ಯ ಇಲಾಖೆ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಒಳ ಚರಂಡಿ ಮಂಡಳಿ ಹೀಗೆ ಎಲ್ಲಾ ಇಲಾಖೆಗಳು ಹೆಸರಿಗೆ ಮಾತ್ರ ಇದೆ. ನಾವು ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ವನ ಮಹೋತ್ಸವ ಆಚರಿಸುತ್ತಿರುವ ವಿಷಯ ಗೊತ್ತಿದೆ. ದೊಡ್ಡ ರೀತಿಯ ಸಭೆ ಪ್ರಚಾರ ಆಂದೋಲನ ನಡೆಯುತ್ತದೆ. ಬೆಳಿಗ್ಗೆಯಿಂದ ಸಂಜೆಗೇ ಕಾರ್ಯಕ್ರಮ ಮುಗಿಯಿತು. ಅಲ್ಲಿಗೆ ದಿನದ ಮಹತ್ವ ಮುಗಿಯಿತು. ಇದೇ ರೀತಿ ಅದನ್ನು ಫಾಲೋ ಅಪ್ ಮಾಡೋಲ್ಲ. ಯಾವ ಒಬ್ಬ ಅಧಿಕಾರಿ ಅಥವಾ ಇಲಾಖೆ ಸಿಬ್ಬಂದಿ ಆಗಲಿ ನೆಟ್ಟ ಗಿಡಗಳು ಎಷ್ಟು ಉಳಿದಿದೆ ಅಂತ ಯಾರು ಲೆಕ್ಕ ಇಡುತಾರೇ? ವೇದಿಕೆಯಲ್ಲಿ ಭಾಷಣ ಬಿಗಿಯುವುದು ಮಾತ್ರ ಇವರ ಕೆಲಸ. ಇನ್ನು ವನ್ಯ ಜೀವಗಳ ಸಂರಕ್ಷಣೆ ಅದಕ್ಕೆ ಇಲಾಖೆ ಮಾಡುವುದು ಇದನ್ನೇ ಇನ್ನು ಇಂತಹ ಇಲಾಖೆಗಳಲ್ಲಿ ಕೆಲಸ ಮಾಡುವವರು ಪರಿಸರದ ಉಳಿಸಿಕೊಳ್ಳುವ ಭಾವನೆಯೊಂದಿಗೆ ಕೆಲಸ ಮಾಡಬೇಕು. ಅವರು ಒಂದು ಗಿಡ ನೆಟ್ಟರೆ ಅದರೊಡನೆ ಅವರು ಬೆಳೆಯಬೇಕು. ಅಂದರೆ ಪ್ರಕೃತಿಯೊಡನೆ ಅವರಿಗೆ ನಾನು ನನ್ನದು ಎಂಬ ಭಾವನೆ ಮೂಡಬೇಕು. ಪರಿಸರ ಉಳಿಯಬೇಕಾದರೆ ನಮ್ಮಲ್ಲಿ ಪರಿಸರ ಪ್ರಜ್ಞೆ ಮೂಡಬೇಕು. ಅದರಲ್ಲೂ ಶಾಲೆ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು. ನಮ್ಮಲ್ಲಿ ಅರಿವು ಮೂಡಿಸುವ ಕೆಲಸ ಹೇಗೆ ಅಂದರೆ ಪಟ್ಟಣದಲ್ಲಿ ಒಂದು ಜಾಥಾ, ಒಂದು ಸಭಾ ಕಾರ್ಯಕ್ರಮ, ಅತಿಥಿಗಳ ಕೈಯಿಂದ ಗಿಡ ನಡೆಸುವುದು, ಅಲ್ಲಿಗೆ ಪರಿಸರದ ಅರಿವು ಅಥವಾ ವನ ಮಹೋತ್ಸವ ಕಾರ್ಯಕ್ರಮ ಮುಗಿಯಿತು. ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದ ಅರಿವು ಮಕ್ಕಳಲ್ಲಿ ಮೂಡಿಸಬೇಕು ಅದಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು. ಹಿಂದೆ ಶಾಲೆಗಳಲ್ಲಿ ಹೂವು, ಕ್ಕೈ ತೋಟ ಹಾಗೂ ಕೊಡಗಿನ .ಕೆಲವು ಶಾಲೆಗಳಲ್ಲಿ ಕಾಫಿ ತೋಟ ಇತ್ತು. ಮಕ್ಕಳು ಕೆಲಸ ಮಾಡ್ತಾ ಇದ್ದರು. ಅವರಿಗೆ ಅದರ ಅನುಭವ ಆಗುತ್ತಾ ಇತ್ತು. ಈಗ ಶಾಲೆಗಳಲ್ಲಿ ಅದಕ್ಕೆ ಜಾಗವೂ, ಸಮಯವೂ ಇಲ್ಲ. ಇಂತಹ ಕಾರ್ಯಕ್ರಮವನ್ನು ಪ್ರಾಕ್ಟಿಕಲ್ ಆಗಿ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಉದಾಹರಣೆ ಪಕ್ಕದ ಪಾರ್ಕ್ ಮೈದಾನ ಇವುಗಳನ್ನು ಮಕ್ಕಳ ಕೈಯಿಂದ ಕೆಲಸ ಮಾಡಿಸಬೇಕು. ಅವರನ್ನು ಸಮೀಪದಲ್ಲಿ ಇರುವ ಗದ್ದೆ, ತೋಟ, ಕಾಡು, ಗುಡ್ಡಗಳಿಗೆ ಚಾರಣ ಕರೆದುಕೊಂಡು ಹೋದರೆ ಆಗ ಅವರಿಗೂ ಪ್ರಕೃತಿ ಪರಿಸರದ ಪ್ರಜ್ಞೆ ಮೂಡುತ್ತದೆ. ಆದರೆ ಈಗ ಹೇಗೆ ಅಂದರೆ ಪ್ರಾಜೆಕ್ಟ್ ವರ್ಕ್ ಮೂಲಕ ಅದು ಕಾರ್ಡ್ ಬೋರ್ಡ್, ಕೆಜಿ ಕಾರ್ಡ್ ಬಳಸಿ ಅಂರ್ತಜಾಲದಿಂದ ಡೌನ್‍ಲೋಡ್ ಮಾಡಿಕೊಂಡು ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಾರೆ. ಇಲ್ಲಿ ಸಮಯ, ಹಣ, ಕಾಗದ, ಪೋಲಾಗುತ್ತಿದೆ, ಪ್ರಯೋಜನ ಏನು ಇಲ್ಲ. ಮಕ್ಕಳಲ್ಲಿ ಪರಿಸರದ ಮೇಲೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅದಕ್ಕೆ ಪೂರಕವಾದ ಕಾರ್ಯಕ್ರಮ ರೂಪಿಸಬೇಕು. ನಾವು ನಮ್ಮ ಮಕ್ಕಳಿಗೆ ಬಂಗಲೆ, ಕಾರು, ಕೋಟಿ ಕೋಟಿ ಹಣ ಉಳಿಸಿ ಹೋಗಬಹುದು. ಆದರೆ ಅವರಿಗಾಗಿ ಶುದ್ಧ ಗಾಳಿ, ನೀರು, ಪರಿಸರ ಉಳಿಸಲು ಸಾಧ್ಯವೇ. ಇಂದಿನ ಪರಿಸ್ಥಿತಿಯಲ್ಲಿ ಪ್ರಶ್ನೆಗೇ ನಾವು ಉತ್ತರ ಕಂಡು ಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ಬದುಕು ನರಕವಾದೀತು. ಆಯ್ಕೆ ನಮ್ಮ ಕೈಯಲ್ಲಿ.
ಬರಹ : ಬಾಳೆಯಡ ಕಿಶನ್ ಪೂವಯ್ಯ,
ವಕೀಲರು ಮತ್ತು ನೋಟರಿ, ಮಡಿಕೇರಿ
ಫೋನ್ 94488995554