ಸುಂಟಿಕೊಪ್ಪ ಸೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಗದ್ದೆಹಳ್ಳ ಒಕ್ಕೂಟದ ತ್ರೈಮಾಸಿಕ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಆರೋಗ್ಯ ಮಾಹಿತಿ ಹಾಗೂ ಸಾಂಕ್ರಾಮಿಕ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಣೆ ನೀಡಿದರು. ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ತಾಯಿ ಮಾಡಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡಿ, ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ವಲಯದ ಮೇಲ್ವಿಚಾರಕ ಪ್ರಗತಿ ನಿಧಿ ಸಾಲದ ಬಡ್ಡಿಯ ಬಗ್ಗೆ, ದಶಾಂಶದ ಬಗ್ಗೆ, ಸಂಘದ ವಾರದ ಸಭೆಯ ಮಹತ್ವ, ವಿನಿಯೋಗದಾರರ ಬದಲಾವಣೆಯಾದ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾವಿತ್ರಿ ಮಾತನಾಡಿ ಸಂಘವು ಒಳ್ಳೆಯ ರೀತಿಯಲ್ಲಿ ನಡೆಯಬೇಕಿದ್ದಲ್ಲಿ ನಮ್ಮಲ್ಲಿ ಶಿಸ್ತು, ಸಂಯಮ ಅಗತ್ಯ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎತ್ತರಕ್ಕೆ ಬೆಳೆಯಲೆಂದು ಹಾರೈಸಿದರು. ಒಕ್ಕೂಟ ಉಪಾಧ್ಯಕ್ಷ ಆನಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸುಂಟಿಕೊಪ್ಪ ವಲಯ ಮೇಲ್ವಿಚಾರಕಿ ಭವ್ಯ, ಸೇವಾಪ್ರತಿನಿಧಿ ಜ್ಯೋತಿಲಕ್ಷ್ಮೀ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಹಾಜರಿದ್ದರು.