ವಿರಾಜಪೇಟೆ ಸೆ.26 NEWS DESK : ವ್ಯಾಯಾಮ, ಮಿತ ಆಹಾರ ಸೇವೆಯೊಂದಿಗೆ ಪ್ರತಿಯೊಬ್ಬರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಆರ್.ಐ.ಹೆಚ್.ಪಿ ಆಸ್ಪತ್ರೆಯ ಸರ್ಜನ್ ಡಾ. ಸಿ.ಕೆ.ಎನ್ ಚಂದ್ರು ಎಂದು ಸಲಹೆ ನೀಡಿದರು. ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆದಮುಳ್ಳೂರು ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಗುಂಡಿಕೆರೆ ಶಾಫಿ ಜಮಾಅತ್ ಮದ್ರಸಾ ಸಭಾಂಗಣದಲ್ಲಿ ಸಾರ್ವಜನಿಕರಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯಗಳು ಹೆಚ್ಚಾಗುತ್ತಿದ್ದು, ಆರೋಗ್ಯವನ್ನು ಕಾಪಾಡುವಲ್ಲಿ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯ ಎಂದರು. ಕೆ.ಡಿ.ಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ರಹಿತ ಆಹಾರ ಸೇವನೆ ಹಾಗೂ ಕೃಷಿ ಕೆಲಸ ಮಾಡಿಕೊಂಡು ಆರೋಗ್ಯವನ್ನು ಕಾಪಾಡುತ್ತಿದ್ದರು. ಇತ್ತೀಚೆಗೆ ಯಾಂತ್ರಿಕ ಕೆಲಸಗಳು ಹೆಚ್ಚಾಗುತ್ತಿದ್ದಂತೆ ಮಾನವನ ರೋಗಗಳು ಹೆಚ್ಚುತ್ತಿದೆ. ಆಗಿಂದಾಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಬೇಕು ಎಂದರು. ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ನಡೆಸುವುದರಿಂದ ಬಡತನದಲ್ಲಿರುವವರಿಗೆ ಉಪಯೋಗವಾಗಲಿದೆ ಎಂಬ ನಿಟ್ಟಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆರ್.ಐ.ಹೆಚ್.ಪಿ ಆಸ್ಪತ್ರೆಯ ನುರಿತ ವೈದ್ಯರು ತಪಾಸಣೆ ನೀಡಿ, ಔಷದಿಯನ್ನು ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಗ್ರಾ.ಪಂ ಸದಸ್ಯರಾದ ಎಂ.ಎಂ ಇಸ್ಮಾಯಿಲ್ ಮಾತನಾಡಿ, ಪಟ್ಟಣದಿಂದ ದೂರವಿರುವ ಗುಂಡಿಕೆೆರೆ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಿರುವುದರಿಂದ ಸ್ಥಳೀಯರಿಗೆ ಹೆಚ್ಚು ಉಪಯೋಗವಾಗಿದೆ. ಆರೋಗ್ಯವೇ ಪ್ರಮುಖವಾಗಿದ್ದು, ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷರಾದ ಮಾಳೇಟಿರ ಜಫ್ರಿ ಉತ್ತಪ್ಪ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಗ್ರಾಮೀಣ ಭಾಗದ ಜನರು ಶಿಬಿರದ ಸದುಪಯೋಗವನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಹೆಚ್.ಆರ್.ವನಿತ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸೀತ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುತ್ತಂ ಪ್ರದೀಪ್, ಕಿಶೋರ್ ಕುಮಾರ್ ಶೆಟ್ಟಿ, ರವಿಕುಮಾರ್ ಹಾಜರಿದ್ದರು. ಶಿಬಿರದಲ್ಲಿ ಆರ್.ಐ.ಹೆಚ್.ಪಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ನಿಶ್ಚಲ ಎಸ್, ಮಕ್ಕಳ ತಜ್ಞರಾದ ಡಾ.ಕೃಷ್ಣಪ್ರಸಾದ್, ಜನರಲ್ ಸರ್ಜನ್ ಡಾ. ಚಂದ್ರು, ಆಡಳಿತ ಅಧಿಕಾರಿ ಡಾ.ಶುಭ ಆರೋಗ್ಯ ತಪಾಸಣೆ ಮಾಡಿದರು. ಗುಂಡಿಕೆರೆ ಗ್ರಾಮದ ನೂರಾರು ಮಂದಿ ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.