ಮಡಿಕೇರಿ NEWS DESK ಸೆ.26 : 2022ರ ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಕೊಡಗಿನ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜೇಶ್ (42) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಗ್ರಾಮದ ನಿವಾಸಿ ಪ್ರೇಮ ಎಂಬುವವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಲ್ಲದೆ ಜೊತೆಯಲ್ಲಿದ್ದ ಪ್ರೇಮಾ ಅವರ ಸಹೋದರಿ ವೀಣಾ ಅವರ ಮೇಲೂ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಆರೋಪ ರಾಜೇಶ್ ಮೇಲಿದೆ. ಮೊದಲು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಪ್ರೇಮಾ ಅವರನ್ನು ಕೊಲೆ ಮಾಡಲು ರಾಜೇಶ್ ಯತ್ನಿಸಿದ್ದ. ಈ ಪ್ರಯತ್ನ ವಿಫಲವಾದಾಗ ಪ್ರೇಮಾ ಅವರು ಟಿ.ಶೆಟ್ಟಿಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ನ್ನು ಬೈಕ್ ನಲ್ಲಿ ಹಿಂಬಾಲಿಸಿದ್ದ. ನಂತರ ನಿಗಧಿತ ಸ್ಥಳದಲ್ಲಿ ಪ್ರೇಮಾ ಹಾಗೂ ಅವರ ಸಹೋದರಿ ವೀಣಾ ಅವರು ಬಸ್ ನಿಂದ ಇಳಿದು ಹೋಗುತ್ತಿದ್ದಾಗ ರಾಜೇಶ್ ಹಿಂಬಾಲಿಸಿದ್ದಾನೆ. “ನನ್ನ ಮಾವನನ್ನು ಯಾಕೆ ಕೊಂದೆ?” ಎಂದು ಪ್ರೇಮಾಳನ್ನು ಕತ್ತಿಯಿಂದ ಕಡಿದ ಆರೋಪಿ, ವೀಣಾ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ನಂತರ ರಾಜೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡರು. ಸುಮಾರು ಎರಡು ವರ್ಷಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ನಿರ್ದೇಶನದಂತೆ, ವಿರಾಜಪೇಟೆ ಪೊಲೀಸ್ ಉಪ- ಅಧೀಕ್ಷಕ ಆರ್.ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಕುಟ್ಟ ವೃತ್ತದ ವೃತ್ತ ನಿರೀಕ್ಷಕ ಸಿ.ಎ.ಮಂಜಪ್ಪ, ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ ರವೀಂದ್ರ ಅವರ ನೇತೃತ್ವದಲ್ಲಿ ಶ್ರೀಮಂಗಲ ಪೊಲೀಸ್ ಠಾಣಾ ಎ.ಎಸ್.ಐ. ಪ್ರಮೋದ್ ಹಾಗೂ ಪೊನ್ನಂಪೇಟೆ ಠಾಣೆಯ ಪಿ.ಸಿ.ಮಹದೇವಸ್ವಾಮಿ ಅವರನ್ನು ನಿಯೋಜಿಸಿ ತನಿಖೆ ಕೈಗೊಳ್ಳಲಾಯಿತು.