ಮಡಿಕೇರಿ ಸೆ.26 NEWS DESK : ದಸರಾ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ ವೆಂಕಟರಾಜಾ ಮಡಿಕೇರಿ ದಸರಾ ಸಂಬಂಧಿಸಿದಂತೆ ಸ್ವಚ್ಛತೆ ಹಾಗೂ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಕೋರಿದರು. ಪ್ರಾಯೋಜಕತ್ವ ಬಗ್ಗೆ ಗಮನಹರಿಸಬೇಕು. ಈಗಾಗಲೇ ಯುವ ದಸರಾಗೆ ಪ್ರಸಿದ್ಧ ನಟರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾ, ಕಾಫಿ ದಸರಾ, ಹೀಗೆ ವಿವಿಧ ದಸರಾಗಳನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಕೋರಿದರು. ನಾಡಿನ ಖ್ಯಾತ ಹಿನ್ನೆಲೆ ಗಾಯಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣ ಸೇರಿದಂತೆ ಅನೇಕ ಖ್ಯಾತ ನಾಮರನ್ನು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಪ್ರಯತ್ನಗಳು ಸಾಗಿವೆ ಎಂದು ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜನೋತ್ಸವಕ್ಕೆ ಧಕ್ಕೆ ಬಾರದಂತೆ ಜನರ ಸಮಿತಿಯಿಂದಲೇ ಉತ್ಸವ ಸಾಂಪ್ರದಾಯಿಕವಾಗಿ ನಡೆಯುವಂತಾಗಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಮಾರ್ಗದರ್ಶನ ನೀಡುತ್ತದೆ. ಪ್ರತೀ ಉಪ ಸಮಿತಿಗೂ ಸೂಕ್ತ ನಿರ್ವಹಣೆಗಾಗಿ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ ಎಂದರು. ಅರ್ಜುನ್ ಜನ್ಯ, ರಾಜೇಶ್ ಕೃಷ್ಣ, ಶಮಿತಾ ಮಲ್ನಾಡ್ ಸೇರಿದಂತೆ ಹೆಸರಾಂತ ಕಲಾವಿದರನ್ನು ಮಡಿಕೇರಿ ದಸರಾಗೆ ಆಹ್ವಾನಿಸಲು ಯೋಜನೆ ರೂಪಿಸಲಾಗಿದೆ ಎಂದರು. ಈ ಹಿಂದಿನ ಸಂಪ್ರದಾಯದಂತೆ ಮತ್ತು ಆಚರಣೆಗಳಿಗೆ ಧಕ್ಕೆ ಬಾರದಂತೆ ವೈಭವದಿಂದ ದಸರಾವನ್ನು ಈ ಬಾರಿಯೂ ಆಚರಿಸಲಾಗುತ್ತದೆ ಎಂದರು. ವಿವಿಧ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.