ಮಡಿಕೇರಿ NEWS DESK ಅ.1 : ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ಕೊಡವರ ಮಾತೃಭೂಮಿ ಕೊಡವಲ್ಯಾಂಡ್ ಮೇಲೆ ನಡೆಸುತ್ತಿರುವ ನಯವಂಚನೆಯ ಸಂಚನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಯಲು ಮಾಡಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಶ್ರೀಮಂಗಲದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಗಣೇಶೋತ್ಸವ, ದಸರಾ, ಹಾಕಿ ಉತ್ಸವ, ದೇವಾಲಯಗಳ ಹಬ್ಬಗಳಿಗೆ ದೇಣಿಗೆ ನೀಡುತ್ತಿರುವ ಭೂಮಾಫಿಯಾಗಳು ದಾನ, ಧರ್ಮ, ಪರಿಸರ ಸಂರಕ್ಷಣೆಯ ನಾಟಕವಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸಮಾಜಸೇವೆಯ ಮುಖವಾಡ ತೊಟ್ಟುಕೊಂಡಿದ್ದಾರೆ. ಈ ನಯವಂಚಕತನದ ಷಡ್ಯಂತ್ರವನ್ನು ಸಿಎನ್‌ಸಿ ಸಂಘಟನೆ ಹೋರಾಟದ ಮೂಲಕ ಬಯಲು ಮಾಡಲಿದೆ ಎಂದರು. ತೆಲಂಗಾಣ ಮತ್ತು ಆಂಧ್ರ ಭಾಗದ ಬಂಡವಾಳಶಾಹಿಗಳು ಕೊಡವರ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದೆ. ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು, ಉದ್ಯಮಪತಿಗಳಿಗೆ ವಿಧಾನಸೌಧದ ಬೆಂಬಲವಿದೆ ಎಂದು ಆರೋಪಿಸಿದರು. ಹಿರಿಯರು ಉಳಿಸಿ ಬೆಳೆಸಿದ ಕೊಡವಲ್ಯಾಂಡ್ ನ ಹಸಿರ ಪರಿಸರ, ಅಮೂಲ್ಯ ಭೂಸಂಪತ್ತು ಪರರ ಪಾಲಾಗುತ್ತಿದೆ. ಇದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಉತ್ತರ ಖಂಡ್ ನಲ್ಲಿ ಭೂಖರೀದಿಗೆ ವಿರೋಧವಿದೆ. ಕೊಡಗಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಕೇರಳದ ವಯನಾಡಿನ ಮಾದರಿಯ ಘೋರ ದುರಂತ ಸಂಭವಿಸಬಹುದು ಎಂದು ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಕಪ್ಪುಹಣವನ್ನು ಬಿಳಿ ಮಾಡುವುದಕ್ಕಾಗಿ ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸಿ ರೆಸಾರ್ಟ್, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುತ್ತಿರುವ ಮಾಫಿಯಾಗಳು ಅರಣ್ಯ ಪ್ರದೇಶವನ್ನು ಕೂಡ ಒತ್ತುವರಿ ಮಾಡಿಕೊಳ್ಳುತ್ತಿವೆ. ಸರ್ಕಾರದ ಕೃಪಾಕಟಾಕ್ಷದಿಂದ ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರೀ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹಾಕಲಾಗುತ್ತಿದೆ. ಈ ಎಲ್ಲಾ ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ವಿವಿಧ ಆಮಿಷಗಳನ್ನೊಡ್ಡಿ ಸಮಾಜ ಸೇವೆಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು. ಕೊಡವರು ನಡೆಸುತ್ತಿರುವ ಪರಿಸರ ಸ್ನೇಹಿ ಹೋಂಸ್ಟೇಗಳ ವಿರುದ್ಧ ರೆಸಾರ್ಟ್ ಮಾಫಿಯಾಗಳು ಸಂಚು ರೂಪಿಸುತ್ತಿವೆ. ಕೊಡವರು ಸಂಚರಿಸುವ ಸಾಂಪ್ರದಾಯಿಕ ರಸ್ತೆಗಳಿಗೆ ಬೇಲಿ ನಿರ್ಮಿಸಿ ಅಡ್ಡಿಪಡಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಮಟ್ಟದ ಸಚಿವರು, ಮಾಜಿ ಸಚಿವರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು ಕೊಡಗಿನಲ್ಲಿ ಬೃಹತ್ ಪ್ರಮಾಣದ ಭೂಮಿ ಹೊಂದಿದ್ದು, ಇವರುಗಳಿಂದಲೂ ಸಾವಿರಾರು ಮರಗಳು ಹನನವಾಗುತ್ತಿವೆ, ನೀರಿನ ಬಳಕೆಯಾಗುತ್ತಿದೆ. ಇವರುಗಳಿಗೆ ಯಾರಿಗೂ ಅನ್ವಯವಾಗದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದೆ. ಕೊಟ್ಟಾಯಂನ ಬೃಹತ್ ಟಿಂಬರ್ ಉದ್ಯಮಪತಿಗಳು ಇಡೀ ಕೊಡಗನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಯಾವ ಕಾನೂನು ಅನ್ವಯವಾಗುವುದಿಲ್ಲ. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‌ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು `ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.
::: ವಿವಿಧೆಡೆ ಜನಜಾಗೃತಿ ::: ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಅ.5 ರಂದು ತಿತಿಮತಿ, ಅ.9ರಂದು ಅಮ್ಮತ್ತಿ, ನಂತರದ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಅಜ್ಜಮಾಡ ಸಾವಿತ್ರಿ, ಅಜ್ಜಮಾಡ ಸುಮಾ, ಚೊಟ್ಟೆಯಂಡಮಾಡ ಪಾರ್ವತಿ, ಚೆಂಗುಲಂಡ ರಾಜಪ್ಪ, ಚೆಂಗುಲoಡ ರಾಲಿ, ಅಜ್ಜಮಾಡ ಮೋಹನ್, ಅಜ್ಜಮಾಡ ಇಮ್ಮಿ, ಅಜ್ಜಮಾಡ ಚೆಂಗಪ್ಪ, ಮಾಣೀರ ಮುತ್ತಪ್ಪ, ಬಾದುಮಂಡ ರಾಜಪ್ಪ, ಚೋಟ್ಟೆಯಂಡಮಾಡ ತಿಮ್ಮಯ್ಯ, ಕಾಳಿಮಾಡ ಹರೀಶ್, ತೀತಿರ ಸೂರಜ್, ತೀತಿರ ಶರಣು ಸುಬ್ರಮಣಿ, ಬಾದುಮಂಡ ಉಮೇಶ್, ಮುಕ್ಕಾಟಿರ ಕಾಶಿ, ಬಾದುಮಂಡ ಮುದ್ದಯ್ಯ, ಐಪುಮಾಡ ಸುಬ್ಬಯ್ಯ, ಕಾಳಿಮಾಡ ತಮ್ಮ, ಅಲ್ಲೇಟಿರ ವಿಜಯ್ ಮಾಚಯ್ಯ, ಕೊಟ್ರಂಗಡ ಅರುಣ, ಬಾದುಮಂಡ ವಿಜಯ, ಬಾಚಂಗಡ ದಾದಾ, ಕಳ್ಳಂಗಡ ಮದನ್, ಚೇಂದ್ರಿಮಾಡ ವಿವೇಕ್ ಕಾರ್ಯಪ್ಪ, ಅಯ್ಯಮಾಡ ಕಾರ್ಯಪ್ಪ, ನೂರೇರ ಸೋಮಯ್ಯ, ಚೆಂದ್ರಿಮಾಡ ವಸಂತ್, ತಡಿಯಂಗಡ ಅಚ್ಚಯ್ಯ, ಕಳ್ಳಿಚಂಡ ಮಧು, ಮತ್ರಂಡ ಅಯ್ಯಪ್ಪ, ಬಾದುಮಂಡ ಚಿಮ್ಮ, ಅಜ್ಜಮಾಡ ಸಿದ್ದು, ಪೆಮ್ಮಣಮಾಡ ಡಾಲಿ, ಅಜ್ಜಮಾಡ ನವೀನ್, ಕಾಳಿಮಾಡ ದಿಲೀಪ್, ಆಲೆಮಾಡ ಅಯ್ಯಪ್ಪ, ಬಾಚಂಗಡ ನಂಜಪ್ಪ, ಚೆಂದಂಡ ವಿಶ್ವನಾಥ್, ತೀತಿರ ತಮ್ಮಯ್ಯ, ಕೊಟ್ರಂಗಡ ಮುಕುಂದ, ಬಾದುಮಂಡ ಲವ, ಕಳ್ಳಂಗಡ ರಜಿತ್, ಮದ್ರಿರ ವಿಷ್ಣು, ಕಳ್ಳಂಗಡ ವಿಠಲ್ ನಾಣಯ್ಯ, ಕುಂಞoಗಡ ಬೋಸ್, ಕಳ್ಳಂಗಡ ರಾಯ್, ಮಾದೀರ ಸುಧಿ, ಮಚ್ಚಮಾಡ ರಂಜಿ, ಕಳ್ಳಂಗಡ ಕಿಶನ್, ಬಾಚರಣಿಯಂಡ ಚಿಪ್ಪಣ, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್ ಪಾಲ್ಗೊಂಡಿದ್ದರು.