ಮಡಿಕೇರಿ ಅ.1 NEWS DESK : ಕೂರ್ಗ್ ಕಾಫಿ ವುಡ್ ಮೂವಿಸ್‍ನ ಬ್ಯಾನರ್ ಅಡಿಯಲ್ಲಿ ತಯಾರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ಬೇರ್” (The Root) ಕೊಡವ ಸಿನಿಮಾ ಅ.4 ರಂದು ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಈಗಾಗಲೇ ಬಾಂಗ್ಲಾ ದೇಶದ ಢಾಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಲ್ರ್ಡ್ ಪ್ರೀಮಿಯರ್ ಪ್ರದರ್ಶನ ಕಂಡು ಹೆಸರು ಮಾಡಿರುವ “ಬೇರ್” (The Root) ಕೊಡವ ಸಿನಿಮಾ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಇದೀಗ “ಬೇರ್” ಕೊಡವ ಸಿನಿಮಾ ಮೈಸೂರಿನ ಇನಾಕ್ಸ್ ಚಿತ್ರಮಂದಿರದಲ್ಲಿ ಶುಕ್ರವಾರ ಮಧ್ಯಾಹ್ನ 1.15ಕ್ಕೆ ಪ್ರದರ್ಶನಗೊಳ್ಳಲಿದೆ. “ಬೇರ್” (The Root) ಪ್ರಪ್ರಥಮ ಬಾರಿಗೆ ಇಂಟಲೆಕ್ಚುವಲ್ ಕೊಡವ ಸಿನಿಮಾವಾಗಿದ್ದು, ಕೆಲವೇ ಪಾತ್ರದಾರಿಗಳ ನಟನೆ ಈ ಸಿನಿಮಾದಲ್ಲಿದೆ. ತಮ್ಮದಲ್ಲದ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಯುವ ಪೀಳಿಗೆಗೆ ಸಂದೇಶವನ್ನು ನೀಡುವ ವಿಭಿನ್ನ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಮೊಣ್ಣಂಡ ನೇಹ ಮೋಟಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಗುಮ್ಮಟ್ಟಿರ ಕಿಶು ಉತ್ತಪ್ಪ ಹಾಗೂ ತೊರೇರ ಕವನ, ಬಾಲನಟರಾಗಿ ತೇಜಲ್ ಕಾರ್ಯಪ್ಪ ಹಾಗೂ ತನಮ್ ಕಾರ್ಯಪ್ಪ ನಟಿಸಿದ್ದಾರೆ. ಚಿತ್ರಕ್ಕೆ ಸಂಭಾಷಣೆ ನೀಡಿರುವ ಈರಮಂಡ ಹರಿಣಿ ವಿಜಯ್ ಹಾಗೂ ಇತಿಹಾಸ ಶಂಕರ್ ಸಹ ನಿರ್ದೇಶಕರಾಗಿ, ಶಿವಕುಮಾರ್ ಅಂಬಲಿ ಹಾಗೂ ಸಂತೋಷ ಬಪ್ಪು ಛಾಯಾಗ್ರಾಹಕರಾಗಿ, ಪ್ರದೀಪ್ ಆರ್ಯನ್ ಸಂಕಲನಕಾರರಾಗಿ ಮತ್ತು ವಿಠಲ್ ರಂಗದೊಳ್ ಸಂಗೀತ ನಿರ್ದೇಶಕರಾಗಿ, ಕಲರಿಂಗ್ ನಿಕಿಲ್ ಕಾರ್ಯಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಈರಮಂಡ ವಿಜಯ್ ಉತ್ತಯ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಡಗು, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಚಲನಚಿತ್ರ ಪ್ರಿಯರು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ “ಬೇರ್” (The Root) ಕೊಡವ ಸಿನಿಮಾವನ್ನು ನೋಡುವ ಮೂಲಕ ನಿರ್ದೇಶಕರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮನವಿ ಮಾಡಿದ್ದಾರೆ.
ಪ್ರಕಾಶ್ ಕಾರ್ಯಪ್ಪ ಅವರ ಪತ್ನಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ “ಕಂದೀಲು” ಕೂಡ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.