ಕುಶಾಲನಗರ ಅ.2 NEWS DESK : ಪ್ರತಿಯೊಬ್ಬರೂ ನಮ್ಮ ಸುತ್ತಲಿನ ಪರಿಸರ ಸ್ವಚ್ಚತೆಗೆ ಜತೆಗೆ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಮಂಗಳವಾರ ( ಅ.1 ರಂದು ) ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ( ಎಸ್.ಎಸ್.ಎಸ್.) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದ ವತಿಯಿಂದ ಸ್ವಚ್ಛತೆಯೇ ಸೇವೆ : “ಸ್ವಚ್ಛತಾ ಹೀ ಸೇವಾ” ಆಂದೋಲನದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟಾಗ ಮಾತ್ರ ನಮ್ಮ ಪರಿಸರ ಮತ್ತು ಗ್ರಾಮ ಸುಂದರವಾಗಿ ಕಾಣಲು ಸಾಧ್ಯ ಹಾಗಾಗಿ, ತಾವೆಲ್ಲರೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತಮ್ಮ 155ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಅವರು ದ್ಯೇಯವಾಗಿದ್ದ ಸ್ವಚ್ಛತೆಯ ಹಾದಿಯಲ್ಲಿ ನಡೆದ ಗೌರವಾರ್ಥವಾಗಿ ಸ್ವಚ್ಛತೆಯೇ ಸೇವೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರೇಮಕುಮಾರ್ ಹೇಳಿದರು. “ಸ್ವಭಾವ ಸ್ವಚ್ಛತೆ – ಸಂಸ್ಕಾರ ಸ್ವಚ್ಚತೆ”: ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಯೊಬ್ಬರೂ ಭಾರತಾಂಭೆ ಮಾತೆಯ ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಅದನ್ನು ಪೋಷಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು. ಈ ವರ್ಷದ ಸ್ವಚ್ಛ ಭಾರತ್ ಮಿಷನ್ (ಎಸ್ ಬಿ ಎಮ್) ಧ್ಯೇಯವಾದ ‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ” 2024 ರ ಅಭಿಯಾನದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸುಮಾರು ಎರಡು ಲಕ್ಷ ಅತ್ಯಂತ ಕಷ್ಟಕರ ಮತ್ತು ಕೊಳಕು ಸ್ಥಳಗಳನ್ನು ನಿರ್ದಿಷ್ಟ ಮತ್ತು ಸಮಯ-ಮಿತಿಯಲ್ಲಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ನೈರ್ಮಲ್ಯ ಗುರಿಯು ಈ ವರ್ಷದ ಅಭಿಯಾನದ ಪ್ರಮುಖ ಅಂಶಗಳಾಗಿವೆ.
ಪರಿಸರ ಸ್ವಚ್ಛವಾಗಿರುವುದರಿಂದ ಮನಸ್ಸು ಮತ್ತು ಆರೋಗ್ಯ ಶುದ್ಧವಾಗಲಿದೆ. ಸ್ವಚ್ಛತಾ ಕಾರ್ಯವು ಕೇವಲ ಸರಕಾರದಿಂದ ಮಾಡಲು ಸಾಧ್ಯವಿಲ್ಲ, ಇದರ ಯಶಸ್ಸಿಗೆ ಜನಸಾಮಾನ್ಯರ ಸಂಪೂರ್ಣ ಭಾಗವಹಿಸುವಿಕೆಯಿಂದ ಸ್ವಚ್ಛತಾ ಅಭಿಯಾನ ಯಶಸ್ಸು ಕಾಣಲು ಸಾಧ್ಯ ಎಂದು ಪ್ರೇಮಕುಮಾರ್
ಹೇಳಿದರು. ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ. ದಯಾನಂದ್ ಪ್ರಕಾಶ್, ಎಸ್.ಎಂ.ಗೀತಾ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ವಿದ್ಯಾರ್ಥಿಗಳು ಇದ್ದರು. ನಂತರ ನಡೆದ ಪರಿಸರ ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ಸ್ವಚ್ಚತೆಯೇ ಸೇವೆ ಕುರಿತು ವಿವಿಧ ಪರಿಸರ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಪರಿಸರ ಘೋಷಣೆಗಳನ್ನು ಕೂಗಿದರು.