ಮಡಿಕೇರಿ NEWS DESK ಅ.4 : ಕುಶಾಲನಗರದ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಕಲಹ ನಡೆದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಡಲಿಯಿಂದ ನಡೆಸಿದ ಹಲ್ಲೆಯಿಂದ ಬಸವೇಶ್ವರ ಬಡಾವಣೆಯ ನಿವಾಸಿ ಜೋಸೆಫ್ (55) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಂದರನಗರ ನಿವಾಸಿ ವಸಂತ (46) ಅವರು ಚಿಕಿತ್ಸೆ ಫಲಕಾರಿಯಾಗದೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿ ಬಸವೇಶ್ವರ ಬಡಾವಣೆಯ ನಿವಾಸಿ ಗಿರೀಶ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಜೋಸೆಫ್ ಹಾಗೂ ವಸಂತ ಅವರು ಮನೆಯ ಬಳಿ ಇದ್ದಾಗ ಗಿರೀಶ್ ಬಂದು ಈ ಹಿಂದೆ ಮಾಡಿದ ಕೆಲಸದ ಬಾಕಿ ಹಣ ನೀಡುವಂತೆ ಜೋಸೆಫ್ ಅವರ ಬಳಿ ಕೇಳಿದ್ದಾನೆ. ಯಾವುದೇ ಹಣ ನೀಡಲು ಬಾಕಿ ಇರುವುದಿಲ್ಲ ಎಂದು ಜೋಸೆಫ್ ಅವರು ಹೇಳಿದಾಗ ಕುಪಿತಗೊಂಡ ಗಿರೀಶ್ ತನ್ನ ಮನೆಗೆ ಹೋಗಿ ಕೊಡಲಿ ತಂದು ಜೋಸೆಫ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ತಡೆಯಲು ಹೋದ ವಸಂತ ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಜೋಸೆಫ್ ಅವರು ಸ್ಥಳದಲ್ಲೇ ಮೃತಪಟ್ಟರೆ, ವಸಂತ ಅವರು ಮಡಿಕೇರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್ ಕೆ., ಪಿಎಸ್ಐ ಮೊಹನ್ರಾಜು.ಪಿ, ಸಿಬ್ಬಂದಿಗಳು ಹಾಗೂ ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಮತ್ತು ಸಾಕ್ಷಾö್ಯಧಾರಗಳನ್ನು ಕಲೆ ಹಾಕಿದರು. ತನಿಖೆ ಕೈಗೊಂಡ ವಿಶೇಷ ತಂಡ ಆರೋಪಿ ಗಿರೀಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.