
ಗೋಣಿಕೊಪ್ಪ NEWS DESK ಸೆ.10 : ಶಿಕ್ಷಕರ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ಶಾಲೆಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಶಾಲೆಯ ದ್ವಾರದಿಂದಲೇ ಭವ್ಯ ಸ್ವಾಗತ ಮೆರವಣಿಗೆ ಆಯೋಜಿಸಲಾಗಿತ್ತು. ಎಸ್‌ಡಿಎಂಸಿ ಸದಸ್ಯರು ಆರತಿ ತಟ್ಟೆ ಹಿಡಿದು ಮೆರವಣಿಗೆಯ ಮುಂಭಾಗದಲ್ಲಿ ಸಾಗಿದರು. ಶಾಲೆಯ ಲೀಡರ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ, ಶಿಕ್ಷಕರಿಗೆ ಪುಷ್ಪವೃಷ್ಟಿ ಸುರಿಸುತ್ತಾ ವೇದಿಕೆಯತ್ತ ಕರೆತಂದರು. ವೇದಿಕೆಯ ಮುಂಭಾಗದಲ್ಲಿ ಶಿಕ್ಷಕರಿಗೆ ಆರತಿ ಬೆಳಗಿ, ತಿಲಕ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸೇರಿದಂತೆ ಶಿಕ್ಷಕರಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾಕುಮಾರಿ, ಯಸ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ ಹಾಗೂ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಜಗದೀಶ್ ಜೋಡುಬೀಟಿ, “ಶಿಕ್ಷಕರು ಮನುಷ್ಯರನ್ನು ರೂಪಿಸುವ ಮೌನ ಶಿಲ್ಪಿಗಳು. ಅವರು ಕಟ್ಟುವುದು ಕಟ್ಟಡವಲ್ಲ, ಭವಿಷ್ಯ. ಅವರು ಬೆಳೆಸುವುದು ಬೆಳೆಯಲ್ಲ, ಪೀಳಿಗೆ. ಅವರು ಬಿತ್ತುವುದು ಕೇವಲ ಅಕ್ಷರವಲ್ಲ, ಆಲೋಚನೆ” ಎಂದು ಶಿಕ್ಷಕರ ಮಹತ್ವವನ್ನು ವಿವರಿಸಿದರು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ಭಾವುಕರಾಗಿ ಮಾತನಾಡಿದರು. ಬಳಿಕ ಶಿಕ್ಷಕರಿಗಾಗಿ ನೀರು ತುಂಬಿಸುವುದು, ಸೇಬು ಕಚ್ಚುವುದು, ಮಡಕೆ ಒಡೆಯುವುದು, ಪಾಸಿಂಗ್ ದಿ ಬಾಲ್, ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ನಂತರ ಶಿಕ್ಷಕರಿಗಾಗಿ ವಿಶೇಷ ಭೋಜನಕೂಟ ಏರ್ಪಡಿಸಲಾಗಿತ್ತು. ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ ಪ್ರಾರ್ಥಿಸಿದರು. ಸದಸ್ಯೆ ಗೌರಿ ಸ್ವಾಗತಿಸಿದರು. ಸೌಮ್ಯ ವಂದನಾರ್ಪಣೆ ನೆರವೇರಿಸಿದರು. ಚಂದ್ರಕಲಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರಾದ ಅನಿತಾ, ಕೌಶರ್, ಮಂಜುಳ, ಮೀನ, ರಾಕೇಶ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









