ಮಡಿಕೇರಿ ಅ.5 NEWS DESK : ಕೊಡವ ಮಕ್ಕಡ ಕೂಟದ 95ನೇ ಪುಸ್ತಕ, ಬರಹಗಾರ್ತಿ ಸುಮನ್ ಸೀತಮ್ಮ ಅವರು ರಚಿಸಿರುವ “ಭಾವಸ್ತುತಿ”ಯನ್ನು ಇಂದು ಬಿಡುಗಡೆ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಬರಹಗಾರರು ಹಾಗೂ ಸಮಾಜ ಸೇವಕರಾದ ತೆನ್ನಿರ ಟೀನಾ ಚಂಗಪ್ಪ, ಹೊಸ ಹೊಸ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಬರಬೇಕು. ಸಾಹಿತ್ಯಾಭಿಮಾನಿಗಳು ಆರ್ಥಿಕ ಸಹಕಾರ ಮತ್ತು ನೆರವು ನೀಡುತ್ತಾರೆ. ಆರ್ಥಿಕತೆಯ ಕಾರಣದಿಂದ ಬರಹಗಾರರು ಹಿಂದೆ ಸರಿಯಬಾರದು ಎಂದರು. ಸಾಹಿತ್ಯ ಕ್ಷೇತ್ರ ಮತ್ತು ಬರಹಗಾರರಿಗೆ ಕೊಡವ ಮಕ್ಕಡ ಕೂಟ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ. ಕೂಟದ 100ನೇ ಪುಸ್ತಕ ಸಧ್ಯದಲ್ಲಿಯೇ ಬಿಡುಗಡೆಯಾಗುತ್ತಿದ್ದು, ಮತ್ತಷ್ಟು ಪುಸ್ತಕಗಳು ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಪರಿಶ್ರಮದಿಂದ ಸಾಹಿತ್ಯ ಲೋಕಕ್ಕೆ ಸಿಗಲಿ ಎಂದು ಹಾರೈಸಿದರು. “ಭಾವಸ್ತುತಿ” ಪುಸ್ತಕದ ಬರಹಗಾರರಾದ ಬೊಟ್ಟಂಗಡ ಸುಮನ್ ಸೀತಮ್ಮ ಮಾತನಾಡಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪತ್ರಿಕೆ ಮತ್ತು ಪುಸ್ತಕ ಕಡೆಗಣಿಸಲ್ಪಡುತ್ತಿದೆ. ಮನೆ ಹಾಗೂ ಶಾಲೆಯಿಂದಲೇ ಓದುವ ಹವ್ಯಾಸ ಸೃಷ್ಟಿಯಾಗಬೇಕು ಎಂದರು. ಭಾವನೆಗಳ ಸಾರಕ್ಕೆ ನನ್ನ ಎರಡನೇ ಪುಸ್ತಕ “ಭಾವಸ್ತುತಿ” ಯಲ್ಲಿ ಅಕ್ಷರಗಳ ರೂಪ ನೀಡಿದ್ದೇನೆ. ಬರವಣಿಗೆಗೆ ನನ್ನ ಮನೆಯಿಂದಲೇ ಪ್ರೇರಣೆ ದೊರೆತ್ತಿದೆ, ಅಕ್ಷರಕ್ಕೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಗೌರವ ನೀಡಿದ್ದಾರೆ. ನೋವು, ನಲಿವು, ಪ್ರೀತಿ, ಜೀವನ ಶೈಲಿ, ಹಬ್ಬ, ಗುರಿ ಮೊದಲಾದ ವಿಚಾರಗಳು ಪುಸ್ತಕದಲ್ಲಿದೆ ಎಂದು ತಿಳಿಸಿದರು. ಸಮಾಜ ಸೇವಕರಾದ ಬಾಳೆಯಡ ಮೀನಾ ಕುಮಾರಿ ಮಾತನಾಡಿ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಯಾವುದೇ ಸನ್ನಿವೇಶ ಎದುರಾದರೂ ಪುಸ್ತಕಗಳನ್ನು ಓದಿ ನೆಮ್ಮದಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ರಚಿಸಿರುವ “ಕಾವೇರಿ ಸುಪ್ರಭಾತ” ಪುಸ್ತಕವನ್ನು ಅ.16 ರಂದು ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಗುವುದು. ಕಾವೇರಿ ತುಲಾ ಸಂಕ್ರಮಣದ ದಿನವಾದ ಅ.17 ರಂದು ತಲಕಾವೇರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದರು. ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ಮಕ್ಕಡ ಕೂಟ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ಉಚಿತವಾಗಿ ನೀಡುತ್ತಿದೆಯೇ ಹೊರತು ಮಾರಾಟ ಮಾಡುತ್ತಿಲ್ಲ. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಓದುವ ಹವ್ಯಾಸ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಉತ್ಸಾಹಿ ಬರಹಗಾರರು ಮುಂದೆ ಬಂದರೆ ಪುಸ್ತಕ ಪ್ರಕಟಣೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಇದೇ ಅ.26 ರಂದು 99ನೇ ಪುಸ್ತಕ ಮತ್ತು ನವೆಂಬರ್ ನಲ್ಲಿ 100ನೇ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ಬೊಳ್ಳಜಿರ ಅಯ್ಯಪ್ಪ ಹೇಳಿದರು. ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಖಜಾಂಚಿ ಉಳ್ಳಿಯಡ ಗಂಗಮ್ಮ ನಂಜಪ್ಪ ಹಾಗೂ ಬರಹಗಾರ ಬೊಟ್ಟಂಗಡ ತಿಲಕ್ ಉಪಸ್ಥಿತರಿದ್ದರು.
::: ಪರಿಚಯ :::
::: ಬೊಟ್ಟಂಗಡ ಸುಮನ್ ಸೀತಮ್ಮ ::: ಮಡಿಕೇರಿ ಕೆ.ನಿಡುಗಣೆ ಗ್ರಾಮದ ಬೊಳ್ಳೆರ ಹೇಮಾವತಿ, ತಮ್ಮಯ್ಯನವರ ಪುತ್ರಿ ಬೊಟ್ಟಂಗಡ ಸುಮನ್ ಸೀತಮ್ಮ, ಪದ್ಮನಾಭ ಎಂಬ ಅಂಕಿತನಾಮದಲ್ಲಿ ಮುಕ್ತಕಗಳನ್ನು ಬರೆಯುವ ಇವರು ತಮ್ಮ ಬಿ.ಎ.ಪದವಿಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು, ಬಿ.ಎಡ್. ವಿರಾಜಪೇಟೆಯ ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ಕನ್ನಡದಲ್ಲಿ ಎಂ.ಎ.ಪದವಿಯ ವಿದ್ಯಾಭ್ಯಾಸ ನಡೆಯುತ್ತಿದೆ. ಪ್ರವೃತ್ತಿಯಿಂದ ಓದುವ ಮತ್ತು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಿಂದ ಶಿಕ್ಷಕರಾಗಿರುವ ಇವರು 2014ರ ಪಿ.ಯು.ಸಿ.ಕಲಾ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಕವನ, ಲೇಖನ, ಸಣ್ಣಕತೆಗಳು ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಗಜಲ್‍ಗಳನ್ನೂ ರಚಿಸುತ್ತಿರುವ ಇವರ “ನಡೆಕೋರ್ ತೂಡ್” ಕೊಡವ ಭಾಷಾ ಕೃತಿ ಈಗಾಗಲೇ ಲೋಕಾರ್ಪಣೆ ಕಂಡಿದೆ. ಕೊಡಗಿನ ಶಕ್ತಿ ದಿನಪತ್ರಿಕೆ, ರಾಜ್ಯ ಮಟ್ಟದ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿಯೂ ಇವರ ಹಲವಾರು ಲೇಖನ ಮತ್ತು ಕವನಗಳು ಪ್ರಕಟವಾಗಿವೆ. ಕೊಡವ ಭಾಷೆಯ ಬರಹಗಳು ಬ್ರಹ್ಮಗಿರಿ, ಪೂಮಾಲೆ ಪತ್ರಿಕೆಗಳು ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಪೊ0ಗುರಿ’ಯಲ್ಲಿಯೂ ಕತೆ, ಕವನಗಳು ಪ್ರಕಟಗೊಂಡಿದೆ. ರಾಜ್ಯ ಮಟ್ಟದ ವಾಟ್ಸ್ ಆಪ್ ಬಳಗದ ಸ್ಪರ್ಧೆಯ ಲೇಖನಗಳನ್ನು ವಿಮರ್ಶೆ ಮಾಡಿರುತ್ತಾರೆ. ಜಿಲ್ಲಾ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಕೆಲವು ಕೊಡವ ಕವನಗಳು ಹಾಡಿನ ರೂಪವನ್ನು ಪಡೆದುಕೊಂಡಿದೆ. ಕೊಡವ ಭಾಷೆಯಲ್ಲಿ ಚುಟುಕು, ಶಾಯರಿಗಳ ರಚನೆ ಮುಕ್ತಕ, ಹಾಯ್ಕುಗಳ ರಚನೆ. ಮುಕ್ತಕಗಳು ‘ಸ್ವಾತಿ ಮುತ್ತು’ ಎನ್ನುವ ಸಂಪಾದಿತ ಪುಸ್ತಕದಲ್ಲಿ ಪ್ರಕಟಗೊಂಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ನಡೆದ ಹಲವು ಆನ್‍ಲೈನ್ ಸಾಹಿತ್ಯಕ ಸ್ಪರ್ಧೆಗಳಲ್ಲಿ ಬಹುಮಾನಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಂದ ನಡೆಸಲಾದ ಪೈಪೋಟಿಗಳಲ್ಲೂ ಬಹುಮಾನಗಳು ಪಡೆದುಕೊಂಡಿದ್ದಾರೆ. ‘ನುಡಿ ಸಂಗಮ’ ಫೇಸ್ಟುಕ್ ಬಳಗದಲ್ಲಿ ಇವರ ಚುಟುಕಗಳು ಪ್ರಕಟವಾಗಿವೆ. ಕೊಡವ ಟ್ಯಾಲೆಂಟ್ ಶೋ ಎಂಬ ಯೂಟ್ಯೂಬ್ ಬಳಗದಲ್ಲಿ ಇವರ ಕುರಿತು ವೀಡಿಯೋ ಪ್ರಕಡಿಸಲಾಗಿದೆ. 2018ನೆಯ ಇಸವಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಿಂದ ಕನ್ನಡ ಐಚ್ಚಿಕ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಹಾಗೂ ‘ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪ್ರಸ್ತುತ ಪತಿ ಬೊಟ್ಟಂಗಡ ತಿಲಕ್ ಅವರೊಂದಿಗೆ ತೆರಾಲು ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರ ಮಗಳು ಸ್ತುತಿ ಬೋಜಮ್ಮ.