ಮಡಿಕೇರಿ ಅ.5 NEWS DESK : ಯಾವುದೇ ಸಂದರ್ಭದಲ್ಲೂ ಶಿಕ್ಷಣದಿಂದ ವಂಚಿತರಾಗ ಬಾರದು. ಶಿಕ್ಷಣದ ಮೂಲಕವೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಹಲವಾರು ಯೋಜನೆಗಳನ್ನು ನೀಡಿದ್ದು, ಇದರ ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಪೆರುಂಬಾಡಿ ಶಂಸುಲ್ ಉಲಮ ಕ್ಯಾಂಪಸ್ ಆವರಣದಲ್ಲಿ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಅನಾಥಾಶ್ರಮದಿಂದ ನಡೆದ ನಾಲ್ಕು ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಂಶುಲ್ ಉಲಮ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಬಡ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಉನ್ನತ ಶಿಕ್ಷಣದೊಂದಿಗೆ ಉದ್ಯೋಗ ಕಲ್ಪಿಸಿ, ವಿವಾಹ ಕಾರ್ಯವು ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು. ಎಲ್ಲಾ ವರ್ಗದ ಬಾಂಧವರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಲ್ಲಿ ಪ್ರತಿಭಾನ್ವಿತರಾಗಿ ಉನ್ನತ ಹುದ್ದೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಶಂಸುಲ್ ಉಲಮ ಎಜುಕೇಶನಲ್ ಟ್ರಸ್ಟ್ ಅಕಾಡೆಮಿ ಅಧ್ಯಕ್ಷ ಸಿ.ಪಿ.ಎಂ. ಬಶೀರ್‍ಹಾಜಿ ಮಾತನಾಡಿ, ಸಂಶುಲ್ ಉಲಮ ಟ್ರಸ್ಟ್ ಮೂಲಕ 40 ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯ ಮಾಡಲಾಗಿದೆ. ಅನಾಥಾಶ್ರಮದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ಶಿಕ್ಷಣಕ್ಕೂ ಸಹಕಾರ ನೀಡಲಾಗುತ್ತಿದೆ. ದಾನಿಗಳು ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ವಿವಾಹ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಉಲಮಾ, ಉಮರಾರು, ದಾನಿಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಪಾಲ್ಗೊಂಡು ಶುಭ ಕೋರಿದರು. ಧಾರ್ಮಿಕ ನೇತಾರ ಪಾಣಕಾಡ್ ಬಶೀರ್ ಆಲಿ ಶಿಹಾಬ್ ತಂಙಳ್ ನಿಖಾ ನೇತೃತ್ವ ವಹಿಸಿದ್ದರು. ಪ್ರಭಾಶಕ ಸಿರಾಜುದ್ದೀನ್ ಅಲ್ ಕಾಸಿಮಿ ಧಾರ್ಮಿಕ ಪ್ರವಚನ ನೀಡಿದರು. ಸಮಸ್ತ ಕೇಂದ್ರ ಮುಸಾವರ ಸದಸ್ಯ ಹಾಗೂ ಕೊಡಗು ಉಪ ಖಾಝಿ ಎಂ.ಎಂ. ಅಬ್ದುಲ್ಲಾ ಪೈಜಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷ ಅನಿಫ್, ಕೆಎಂಎ ಅಸೋಸಿಯನ್ ಅಧ್ಯಕ್ಷ ಸೂಫಿ ಹಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಫಿ, ಬಸೀರ್, ಯಾಕೂಬ್, ಅಬ್ದುಲ್ ಸಲಾಂ, ಪ್ರಮುಖರಾದ ಮುಸ್ತಫಾ ಹಾಜಿ, ಅಬ್ದುಲ್ ಗಫೂರ್, ಸಿದ್ದೀಕ್, ಉಮ್ಮರ್‍ಪೈಝಿ, ಹಕೀಂ, ಮುಸ್ತಫ ಮಹಮ್ಮದ್ ಅಲಿ, ಹಂಸ ಹಾಜಿ, ಅಶ್ರಫ್, ಸಲೀಂ ಹಾಜಿ, ಬಸೀರ್‍ಎಡಪಲ, ಎ.ಕೆ.ಹಕೀಂ, ಮಣಿ ಮಾಸ್ಟರ್, ಸೇರಿದಂತೆ ಮತ್ತಿತರರು ಹಾಜರಿದ್ದರು.