ಮಡಿಕೇರಿ NEWS DESK ಅ.18 : ಕೊಡಗಿನ ಗಡಿ ಗ್ರಾಮ ಕರಿಕೆ ವ್ಯಾಪ್ತಿಯಲ್ಲಿ ಕಾಡಾನೆ ಮತ್ತು ಕಾಡುಹಂದಿಗಳ ಉಪಟಳ ಮಿತಿ ಮೀರಿದ್ದು, ಅಪಾರ ಬೆಳೆ ನಷ್ಟವಾಗಿದೆ. ಗ್ರಾಮದ ಆಲತ್ತಿಕಡವ್ ನಿವಾಸಿ ರಾಜನ್ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಅಡಿಕೆ ಮತ್ತು ತೆಂಗಿನ ಮರಗಳನ್ನು ನಾಶಪಡಿಸಿವೆ. ಅಕ್ಕಪಕ್ಕದ ನಿವಾಸಿಗಳ ಕುಡಿಯುವ ನೀರಿನ ಪೈಪ್ ಗಳನ್ನು ಜಖಂಗೊಳಿಸಿವೆ. ಇತರ ತೋಟಗಳಿಗೂ ಲಗ್ಗೆ ಇಟ್ಟಿರುವ ಕಾಡಾನೆಗಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಈ ಭಾಗದ ಅನೇಕರು ಪೈಸಾರಿ ಭೂಮಿಯಲ್ಲೇ ಕಳೆದ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷವೂ ಕಾಡಾನೆ ದಾಳಿಯಾಗಿದ್ದು, ಅರಣ್ಯ ಇಲಾಖೆ ಯಾವುದೇ ಪರಿಹಾರ ನೀಡಿಲ್ಲವೆಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕರು ಖುದ್ದು ಕರಿಕೆ ಗ್ರಾಮದ ಕೃಷಿಕರ ಸಮಸ್ಯೆಗಳನ್ನು ಅರಿತು ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
::: ಕಾಡುಹಂದಿಗಳ ಉಪಟಳ :::
ಒಂದೆಡೆ ಕಾಡಾನೆಗಳು ಕೃಷಿ ನಾಶ ಪಡಿಸುತ್ತಿದ್ದರೆ, ಮತ್ತೊಂದೆಡೆ ಕಾಡುಹಂದಿಗಳು ದಾಳಿ ಮಾಡಿ ಭೂಮಿಯೊಳಗಿನ ಕೃಷಿ ಫಸಲನ್ನು ತಿಂದು ತೇಗುತ್ತಿವೆ. ಕೊಚ್ಚಿ ಕಾಲೋನಿ ಸಮೀಪದ ನಿವಾಸಿಗಳಾದ ಕೃಷ್ಣ ಕೆ.ವಿ ಹಾಗೂ ಜಯ ಎಂಬುವವರು ಬೆಳೆದಿದ್ದ ಮರಗೆಣಸನ್ನು ಸಂಪೂರ್ಣವಾಗಿ ತಿಂದಿರುವ ಕಾಡುಹಂದಿಗಳು ಪಕ್ಕದ ತೋಟ, ಗದ್ದೆಗಳಿಗೂ ಹಾನಿ ಮಾಡಿವೆ. ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. (ವರದಿ : ರಾಜೇಶ್, ಕರಿಕೆ)