ಮಡಿಕೇರಿ ಅ.19 NEWS DESK : ಮಡಿಕೇರಿ ದಸರಾ ಯಶಸ್ಸಿಗೆ ಸಹಕರಿಸಿದ ಹಾಗೂ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಪೌರ ಕಾರ್ಮಿಕರನ್ನು ಆತ್ಮೀಯವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್ ರಾಜಾ ಮಡಿಕೇರಿ ದಸರಾ ಯಶಸ್ಸಿಗೆ ಪೌರ ಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಶ್ಲಾಘಿಸಿದರು. ಮಡಿಕೇರಿ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿನ್ನೆಲೆ ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪೌರಕಾರ್ಮಿಕರು ಪರಿಸರ ಶುಚಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯೂ ಪರಿಸರ ಶುಚಿತ್ವಕ್ಕೆ ಒತ್ತು ನೀಡಿರುವುದು ಮೆಚ್ಚುವಂತದ್ದು, ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು. ಕೊಡಗು ಜಿಲ್ಲೆ ಸ್ವಚ್ಚತೆಯಲ್ಲಿ ಇಡೀ ವಿಶ್ವದಲ್ಲಿಯೇ ಮಾದರಿಯಾಗಬೇಕು ಎಂಬುದು ಪ್ರತಿಯೊಬ್ಬರ ಆಶಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಮಡಿಕೇರಿ ನಗರ ಸ್ವಚ್ಚತೆಯಲ್ಲಿ ಈಗಾಗಲೇ 10 ನೇ ಸ್ಥಾನದಲ್ಲಿದ್ದು, ಮತ್ತಷ್ಟು ಶುಚಿತ್ವಕ್ಕೆ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು. ಮಡಿಕೇರಿ ನಗರ ದಸರಾ ಸಮಿತಿ ಗೌರವ ಅಧ್ಯಕ್ಷರಾದ ಜಿ.ಚಿದ್ವಿಲಾಸ್ ಅವರು ಮಾತನಾಡಿ ಪೌರಕಾರ್ಮಿಕರು ಸ್ವಚ್ಛತೆ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ಮಡಿಕೇರಿ ನಗರದ ಪೌರಕಾರ್ಮಿಕರು ಪ್ರತಿನಿತ್ಯ ನಗುಮುಖದಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಶ್ಲಾಘಿಸಿದ ಜಿ.ಚಿದ್ವಿಲಾಸ್ ಅವರು ಬಸವಣ್ಣನವರು ಕಾಯಕವೇ ಕೈಲಾಸ ಎಂಬಂತೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಾರೆ. ಪೌರಕಾರ್ಮಿಕರು ವೃತ್ತಿ ಸಂದರ್ಭದಲ್ಲಿ ಅಗತ್ಯ ಪರಿಕರಗಳನ್ನು ಬಳಸುವಂತಾಗಬೇಕು ಎಂದು ಸಲಹೆ ಮಾಡಿದರು. ಪೌರಾಯುಕ್ತರಾದ ಹೆಚ್.ಆರ್.ರಮೇಶ್ ಮಾತನಾಡಿ, ಇದೇ ಮೊದಲ ಬಾರಿಗೆ ದಸರಾ ಸಮಿತಿ ವತಿಯಿಂದ ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿರುವುದು ವಿಶೇಷವಾಗಿದೆ ಎಂದರು. ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ., ಕ್ರೀಡಾ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕರ್ಕೆರ, ಸ್ವಾಗತ ಸಮಿತಿ ಅಧ್ಯಕ್ಷರಾದ ಕಾನೆಹಿತ್ಲು ಮೊನ್ನಪ್ಪ, ಸಾಂಸ್ಕೃತಿಕ ಸಮಿತಿ ಸದಸ್ಯರಾದ ವೀಣಾಕ್ಷಿ, ಮಿನಾಜ್ ಪ್ರವೀಣ್, ಕವನ್, ಅಭಿಯಂತರರಾದ ಸತೀಶ್, ಹೇಮಂತ್ ಕುಮಾರ್, ಸೌಮ್ಯ, ತಾಹಿರ್, ಇತರರು ಇದ್ದರು.