ಮಡಿಕೇರಿ ಅ.19 NEWS DESK : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಬೇಟಿ ಬಚಾವೋ-ಬೇಟಿ ಪಡಾವೊ ಕಾರ್ಯಕ್ರಮದಡಿಯಲ್ಲಿ ಸೋಮವಾರಪೇಟೆಯಲ್ಲಿ ಅಂತರರಾಷ್ಟೀಯ ಸಾಕ್ಷರತಾ ದಿನಾಚರಣೆ ನಡೆಯಿತು. ಸೋಮವಾರಪೇಟೆ ತಾಲ್ಲೂಕಿನ ಸ್ರ್ತೀಶಕ್ತಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಡೆದ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಮಾತನಾಡಿ, ನಾವು ತಳಮಟ್ಟದಿಂದ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಪೋಷಣಾ ಅಭಿಯಾನ ಯೋಜನೆಯ ಸುಪೋಷಿತ ಕಿಶೋರಿ, ಸಶಕ್ತ ನಾರಿ ಘೋಷವಾಕ್ಯದಂತೆ ಹೆಣ್ಣು ಮಗು ಜನಿಸಿ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಒಂದು ಗುಲಾಬಿ ಹೂ ನೀಡುವುದರ ಮುಖಾಂತರ ಆ ಮಗುವನ್ನು ಸ್ವಾಗತಿಸಬೇಕು ಮತ್ತು ಕುಟುಂಬದವರಿಗೆ ಹೆಣ್ಣು ಮಗುವಿನ ಮಹತ್ವವನ್ನು ತಿಳಿ ಹೇಳಿಬೇಕು. ಇದರಿಂದ ಮುಂದಿನ ದಿನಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಬೇಟಿ ಬಚಾವೋ- ಬೇಟಿ ಪಡಾವೊ ಕಾರ್ಯಕ್ರಮದಡಿಯಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಶಿಕ್ಷಣವಂತಾರಾಗಬೇಕು. ಓದುವ ಹಾಗೂ ಬರೆಯುವ ಸಾಮಥ್ರ್ಯವನ್ನು ಹೊಂದಬೇಕು ಎಂದು ಹೇಳಿದರು. ಇದರಿಂದ ಸಮಾಜದಲ್ಲಿ ಎಲ್ಲಾ ವರ್ಗದವರೊಂದಿಗೆ ಬೆರೆಯುವ ಮತ್ತು ಇತರರೊಂದಿಗೆ ಸಂವಹನ ನಡೆಸಲು ಸಹಕಾರಿಯಾಗಲಿದೆ. ಅಲ್ಲದೆ ತಮ್ಮ ಸಾಮಥ್ರ್ಯದಿಂದ ಸಮುದಾಯ ಬೆಳವಣಿಗೆಗೆ ಪರಿಣಾಮಕಾರಿ ಕಾರ್ಯನಿರ್ವಹಿಸಲು ಸಾಕ್ಷರತೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾತೃವಂದಾನಾ ಯೋಜನೆಯ ಜಿಲ್ಲಾ ಸಂಯೋಜಕಿ ನವ್ಯ, ಪೋಷಣಾ ಅಭಿಯಾನ ಯೋಜನೆ ತಾಲ್ಲೂಕು ಸಂಯೋಜಕಿ ರಂಜಿತಾ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ, ಕೊಡ್ಲಿಪೇಟೆ, ಸುಂಠಿಕೊಪ್ಪ, ಶನಿವಾರಸಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.