ಮಡಿಕೇರಿ ಅ.25 NEWS DESK : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಆರಂಭಗೊಂಡು ಶತಮಾನ ಪೂರೈಸಿದೆ. ಈ ಸಂಕಷ್ಟದಿಂದ ಜನರು ನೆಮ್ಮದಿಯನ್ನು ಕಳೆದುಕೊಂಡಿದ್ದು, ಸುದೀರ್ಘ ಅವಧಿಯಿಂದ ನಡೆದುಕೊಂಡು ಬಂದಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ ತಿಳಿಸಿದ್ದಾರೆ. ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿಯಿಂದ ಆಯೋಜಿತ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಮಾತೆ ಕಾವೇರಿಗೆ ಪೂಜೆ ನೆರವೇರಿಸಿ, ನದಿ ವಿವಾದ ಪರಿಹಾರಕ್ಕೆ ನೋಂದಾವಣೆ ಮಾಡಿರುವ ಸಮಿತಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರಾಜ್ಯದ ವಿವಿಧ ಮಠಾಧೀಶರು, ಸವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನೀರಾವರಿ ತಜ್ಞರು, ಕಾನೂನು ತಜ್ಞರನ್ನು ಒಳಗೊಂಡ ನೂರು ಮಂದಿಯ ವಿಶೇಷ ಸಮಿತಿಯನ್ನು ರಚಿಸಿ ಅದನ್ನು ನೋಂದಾವಣೆ ಮಾಡಲಾಗಿದೆ. ಈ ಸಮಿತಿ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಪರಿಹಾರಕ್ಕೆ ಮುಂದಾಗಿರುವುದಾಗಿ ಮಾಹಿತಿ ನೀಡಿದರು.
ನೋಂದಣಿ ಪತ್ರ ಹಸ್ತಾಂತರ-ಕಾವೇರಿ ನದಿ ವಿವಾದ ಪರಿಹಾರಕ್ಕೆ ರಚಿಸಲಾಗಿರುವ ಕಾವೇರಿ ನದಿ ರಕ್ಷಣಾ ಸಮಿತಿಯನ್ನು ಬೆಂಗಳೂರಿನಲ್ಲಿ ನೋಂದಾವಣೆ ಮಾಡಲಾಗಿದೆ. ಅದರ ಮೂಲ ದಾಖಲಾತಿಯನ್ನು ಇದೇ ಸಂದರ್ಭ ಸಮಿತಿ ಅಧ್ಯಕ್ಷ ಎಚ್.ಕೆ. ರಾಮು ಅವರಿಗೆ ಮೈಸೂರು ಆದಿ ಚುಂಚನಗಿರಿ ಶಾಖ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹಸ್ತಾಂತರಿಸಿ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಎಚ್.ಕೆ. ರಾಮು ಈ ಸಂದರ್ಭ ಮಾತನಾಡಿ, ಬ್ರಿಟೀಷರ ಕಾಲದಿಂದಲೇ ವಿವಾದದ ರೂಪ ಪಡೆದಿರುವ ನದಿ ನೀರಿನ ಹಂಚಿಕೆ ವಿಚಾರವನ್ನು ಶಾಂತ ರೀತಿಯಲ್ಲಿ ಪರಿಹರಿಸಬೇಕು ಎಂಬುದು ಸಂತರ ಆಶಯವಾಗಿದೆ. ಎರಡೂ ರಾಜ್ಯಗಳು ಕೂಡ ಈ ವಿಚಾರವನ್ನು ಸೌಹಾರ್ದತೆಯಿಂದ ಪರಿಹರಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಮಿತಿ ಪಕ್ಷ ಭೇದ ಮರೆತು ಕಾರ್ಯೋನ್ಮುಖವಾಗಲಿದೆ ಎಂದರು. ಸಮಿತಿ ಮೂಲಕ ಕಾವೇರಿ ನದಿ ಹರಿಯುವ ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿ ಸಭೆ ನಡೆಸಿ ವ್ಯಾಜ್ಯ ಪರಿಹಾರಕ್ಕೆ ಸಲಹೆ ಸೂಚನೆ ಪಡೆಯಲಾಗುತ್ತದೆ. ಈ ಅಭಿಪ್ರಾಯವನ್ನು ರಾಜ್ಯ ಮತ್ತು ಕೇಂದ್ರ ಸರಕಾರ, ಕೇಂದ್ರ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೂ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆಂದರು. ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದ ಸ್ವಾಮೀಜಿ, ಚೆನ್ನಬಸವ ದೇಶಿ ಕೇಂದ್ರ ಮಠದ ಸದಾಶಿವ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಪ್ಪಯ್ಯ ಸ್ವಾಮೀಜಿ, ಅಪ್ಪಾಜಿ ಸ್ವಾಮೀಜಿ, ಕಾವೇರಿ ನದಿ ರಕ್ಷಣಾ ಸಮಿತಿ ಗೌರವಾಧ್ಯಕ್ಷರು ಹಾಗೂ ಮಾಜಿ ಎಂಎಲ್‍ಸಿಗಳಾದ ಡಿ.ಎಸ್. ವೀರಯ್ಯ, ದೇವೇಗೌಡ, ಸಮಿತಿ ಪ್ರಧಾನ ಕಾರ್ಯದರ್ಶಿ ರಾಜುಗೌಡ, ಸಮಿತಿ ಪ್ರಮುಖರಾದ ರಾಜಣ್ಣ, ಜಗದೀಶ್, ಯಶೋಧ ರಾಜಣ್ಣ, ಮಂಜುಳಾ ಗೋಪಾಲ್, ಸಿ.ಆರ್.ಸುರೇಶ್ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.