ಸಿದ್ದಾಪುರ ನ.18 NEWS DESK : ಭಾರತೀಯ ನೃತ್ಯ ಕಲಾ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಸಿದ್ದಾಪುರದ ಚರ್ಚ್ ಹಾಲ್‍ನಲ್ಲಿ ಸಭಾಂಗಣದಲ್ಲಿ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಭಾರತೀಯ ನೃತ್ಯ ಕಲಾ ಶಾಲೆಯ ಶಿಕ್ಷಕಿ ವಿದುಷಿ ಜಲಜ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯಶಾಲೆಯ 46 ಕಲಾವಿದರು ಭರತ ನಾಟ್ಯ, ಜಾನಪದ, ರಾಮಾಯಾಣ ಮತ್ತು ಮಹಾಭಾರತ ರೂಪಕಗಳಂತಹ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಕೃಷ್ಣವೇಣಿ ಉದ್ಘಾಟಿಸಿ, ಶುಭ ಹಾರೈಸಿದರು. ಎಸ್‍ಎನ್‍ಡಿಪಿ ಕೊಡಗು ಯೂನಿಯನ್‍ನ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ದೇಶದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಬೇಕಾಗಿದೆ. ಸಿದ್ದಾಪುರ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಬಿಂಬಿಸುವ ಕಲೆಯ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್-5ರ ವಿಜೇತ ರಾಹುಲ್ ರಾವ್ ಅವರ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಗಣ್ಯರು, ಪೋಷಕರು ಉಪಸ್ಥಿತರಿದ್ದರು.