ಮಡಿಕೇರಿ NEWS DESK ಅ.30 : ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಕ್ವೆಸ್ಟ್ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಪರಿಹರಿಸಲು 2 ನೇ ರಾಜ್ಯಗಳ ಮರು-ಸಂಘಟನೆ ಆಯೋಗವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌಲ್ಸಿಲ್ ವತಿಯಿಂದ ನ.1 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಯಿAದ 11.30 ಗಂಟೆಯವರೆಗೆ ಧರಣಿ ನಡೆಸಿ ಹಿರಿಯ ಆರ್ಥಿಕ ತಜ್ಞ, ಕೇಂದ್ರದ ಮಾಜಿ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿಪಾದಿಸಿರುವ 2ನೇ ರಾಜ್ಯಗಳ ಮರು-ಸಂಘಟನೆಯ ಆಯೋಗ ರಚನೆಗಾಗಿ ಆಗ್ರಹಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸಿಎನ್‌ಸಿಯಿಂದ ಮಂಡಿಸಲಾದ ನಮ್ಮ ಸಂವಿಧಾನದ ಆರ್ಟಿಕಲ್ 244, 371 R/w 6ನೇ ಮತ್ತು 8ನೇ ಶೆಡ್ಯೂಲ್‌ನ ಅಡಿಯಲ್ಲಿ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಕ್ವೆಸ್ಟ್ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಪರಿಹರಿಸಲು 2 ನೇ ರಾಜ್ಯಗಳ ಮರು-ಸಂಘಟನೆ ಆಯೋಗದ ಅಗತ್ಯವಿದೆ. ಈ ಕುರಿತು ಸಿಎನ್‌ಸಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದೆ. ಕೊಡವರ ಹಿತಾಸಕ್ತಿ ರಕ್ಷಿಸಲು ಸಂವಿಧಾನದ 7 ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನೆ ಕಾಯಿದೆ 1956 ರ ಅಂಡರ್ ಟೇಕಿಂಗ್ ಗಳಿಗೆ ರಾಜ್ಯವು ಬದ್ಧವಾಗಿಲ್ಲ. ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯ್ನಾಡು ಭಾಗ “ಸಿ” ಕೂರ್ಗ್ ರಾಜ್ಯವು 1956 ರ ನವೆಂಬರ್ 1 ರಂದು ಈಗ ಕರ್ನಾಟಕ ರಾಜ್ಯವಾಗಿರುವ ಅಂದಿನ ವಿಶಾಲ ಮೈಸೂರಿನಲ್ಲಿ ವಿಲೀನವಾದಾಗಿನಿಂದಲೂ ಕೊಡವರನ್ನು ರಾಜ್ಯದ 2ನೇ ದರ್ಜೆಯ ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದೆ. ಇದು ಗಂಭೀರವಾದ ಸಾಂವಿಧಾನಿಕ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಕೊಡವರು ಕೊಡವ ಪ್ರದೇಶದ ಮೂಲನಿವಾಸಿ ಸ್ಥಳೀಯ ಬುಡಕಟ್ಟು ಜನರಾಗಿರುವುದರಿಂದ, ಆಂತರಿಕ ರಾಜಕೀಯ-ಸ್ವಯಂ-ನಿರ್ಣಯ ಹಕ್ಕುಗಳು, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಇತರ 9 ನ್ಯಾಯಸಮ್ಮತವಾದ ಜನಾಂಗೀಯ ಸಮಸ್ಯೆಗಳ ಪ್ರಮುಖ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಧರಣಿ ಸಂದರ್ಭ ಜಿಲ್ಲಾಡಳಿತದ ಮೂಲಕ ರಾಷ್ಟçಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.









