ಮಡಿಕೇರಿ ನ.9 NEWS DESK : ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ವರ್ತಕರು ಹಾಗೂ ವಾಣಿಜ್ಯೋದ್ಯಮಿಗಳು ತಮ್ಮ ತಮ್ಮ ಅಂಗಡಿ, ವಾಣಿಜ್ಯ ಕಟ್ಟಡಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸುವಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆಯೇ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರ ಹಿತದೃಷ್ಟಿಯಿಂದ 2024 ಮೇ 22ರಂದು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮನವಿ ಸಲ್ಲಿಸಿ ಮೂರು ತಿಂಗಳ ಕಾಲಾವಕಾಶ ಕೋರಿತ್ತು. ಈಗಾಗಲೇ ಈ ಕಾಲಾವಕಾಶ ಮುಗಿದಿದ್ದು, ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸುವ ಮೂಲಕ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಬೇಕು. ಇತರ ಭಾಷೆಯ ಮೇಲ್ಭಾಗದಲ್ಲಿ ಕನ್ನಡವನ್ನು ದೊಡ್ಡಾಕ್ಷರಗಳಲ್ಲಿ ಬರೆಯಬೇಕು ಎಂದು ಕೋರಿದ್ದಾರೆ. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿರುವ ನಾಮಫಲಕಗಳನ್ನು ನಗರಸಭೆ ತೆರವುಗೊಳಿಸುತ್ತಿದೆ. ಆದ್ದರಿಂದ ಎಲ್ಲಾ ವರ್ತಕರು ಹಾಗೂ ವಾಣಿಜ್ಯೋದ್ಯಮಿಗಳು ಮುಂದಿನ 4- 5 ದಿನಗಳೊಳಗೆ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸಿರುವ ನಾಮಫಲಕವನ್ನು ಅಳವಡಿಸುವಂತೆ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.