ಸೋಮವಾರಪೇಟೆ ನ.13 NEWS DESK : ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್‍ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಆದೇಶವನ್ನು ಸರ್ಕಾರ ಕೂಡಲೆ ಹೊರಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಸಿದರು. ಪಟ್ಟಣದ ಸಫಾಲಿ ಸಭಾಂಗಣದಲ್ಲಿ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಕಾಲಿಕ ಮಳೆ, ಹವಮಾನ ವೈಪ್ಯರಿತ್ಯದಿಂದ ಜಿಲ್ಲೆಯಲ್ಲಿ ಕಾಫಿ ಫಸಲು ಹಾನಿಯಾಗಿದೆ. ಕಾಫಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಪಂಪ್‍ಸೆಟ್‍ಗಳ ಬಾಕಿ ಬಿಲ್ ಮನ್ನಾ ಮಾಡಬೇಕು, ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರುಗಳು, ಮುಖ್ಯಮಂತ್ರಿಗಳಿಗೆ, ಇಂಧನ ಸಚಿವರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮನವರಿಕೆಯೊಂದಿಗೆ ಒತ್ತಡ ಹೇರಬೇಕು ಎಂದು ಹೇಳಿದರು. ಈಗಾಗಲೇ ಕಾಫಿ ಬೆಳೆಗಾರರ ಎಲ್ಟಿ4ಸಿ ವಿದ್ಯುತ್ ಸಂಪರ್ಕವನ್ನು ಬಿಲ್ ಪಾವತಿಸದ ನೆಪವೊಡ್ಡಿ ಕಡಿತಗೊಳಿಸಲು ಸೆಸ್ಕ್ ಸಿದ್ದತೆ ಮಾಡಿಕೊಂಡಿದೆ. ಸಂಪರ್ಕ ಕಡಿತಗೊಳಿಸಿದರೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಸೆಸ್ಕ್ ದುಸ್ಸಾಹಸಕ್ಕೆ ಮುಂದಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಈ ದೇಶದ ಬೆನ್ನೆಲುಬು. ಆಹಾರ ಬೆಳೆಗಳನ್ನು ಉತ್ಪಾದಿಸುವ ರೈತರಿಗೆ ಸರ್ಕಾರ ರೈತ ಕೇಳಿದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಮಂಡ್ಯ ಸೇರಿದಂತೆ ಇತರ ಜಿಲ್ಲೆಯ ರೈತರು ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿಲ್ಲ. ಕೊಡಗು ಜಿಲ್ಲೆಗೆ ಏಕೆ ಅನ್ಯಾಯ ಎಂದು ಪ್ರಶ್ನಿಸಿದ ಅವರು, ರೈತ ಒಗ್ಗಟ್ಟಾದರೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದುಗಿದೆ. ಈ ನಿಟ್ಟಿನಲ್ಲಿ ಐದು ತಾಲ್ಲೂಕಿನ ರೈತರ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು. ಅಕಾಲಿಕಾ ಮಳೆ, ಹವಮಾನ, ಮಣ್ಣಿನಲ್ಲಿ ತೇವಾಂಶದ ವ್ಯತ್ಯಾಸ ಸೇರಿದಂತೆ ಅನೇಕ ಕಾರಣಗಳಿಂದ ಪ್ರತಿವರ್ಷ ಕಾಫಿ, ಕಾಳುಮೆಣಸು, ಭತ್ತ, ಏಲಕ್ಕಿ ಇತ್ಯಾದಿ ಬೆಲೆಗಳ ಫಸಲು ಹಾನಿಯಾಗುತ್ತಿದೆ. ಪ್ರತಿಯೊಂದಕ್ಕೂ ಪರಿಹಾರ ನೀಡಬೇಕು. ರೈತರು ಪ್ರಶ್ನೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರ ಸೌಲಭ್ಯಗಳು ಸಿಗುತ್ತಿಲ್ಲ. ಎಲ್ಲವನ್ನು ಹೋರಾಟ ಮೂಲಕವೇ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೈತರು ದುರಸ್ತಿ ವಿಳಂಬ, ಲಂಚಕ್ಕಾಗಿ ರೈತರ ಶೋಷಣೆ, ರೈತರ ಕಡತಗಳ ವಿಲೇವಾರಿ ವಿಳಂಬ, ಮಳೆಹಾನಿ ಪರಿಹಾರ ನೀಡದಿರುವುದರ ಬಗ್ಗೆ ರೈತರು ತಮ್ಮ ಅಳಲು ತೋಡಿಕೊಂಡರು. ಕಾರ್ಯಕ್ರಮದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ತಾಲ್ಲೂಕು ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಇದ್ದರು.