ಮಡಿಕೇರಿ ನ.13 NEWS DESK : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ‘ಯುವ ಸಂಸತ್ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಭಾರತವು ವಿಶ್ವದಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿದ್ದು, ಕೇಂದ್ರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ, ಹಾಗೆಯೇ ರಾಜ್ಯದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಒಳಗೊಂಡಿದ್ದು, ಪ್ರಜಾಪ್ರಭುತ್ವ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಾಗಬೇಕು ಎಂದರು. ‘ಜನ ಪ್ರತಿನಿಧಿಗಳು ಜನಸಾಮಾನ್ಯರ ಸೇವಕರಾಗಿದ್ದು, ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಿ ಪರಿಣಾಮಕಾರಿ ಕಾರ್ಯಕ್ರಮ ರೂಪಿಸುವುದು ಪ್ರಜಾಪ್ರಭುತ್ವದ ಮೈಲುಗಲ್ಲಾಗಿದೆ ಎಂದು ಹೇಳಿದರು.’ ಸುಗಮ ಹಾಗೂ ಸುಭದ್ರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ತೆಗೆದುಕೊಂಡು ಹೋಗುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು. ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ ಮಾತನಾಡಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಜಾಪ್ರಭುತ್ವದ ಪಾತ್ರ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ರಾಜಕೀಯ ವಿಜ್ಞಾನವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಜೊತೆಗೆ ಉತ್ತಮ ನಾಯಕತ್ವ ಬೆಳೆಸಿಕೊಳ್ಳುವಂತಾಗಬೇಕು ಎಂದು ಒತ್ತಿ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ.ಮಂಜುಳಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಬಗ್ಗೆ ಅರಿವು ಇರಬೇಕು. ಕೃಷಿ, ಆರೋಗ್ಯ, ಶಿಕ್ಷಣ, ರಕ್ಷಣೆ, ವಿದೇಶಾಂಗ ವ್ಯವಹಾರ ಹೀಗೆ ಪ್ರತಿಯೊಂದರ ಬಗ್ಗೆಯೂ ಅರಿವು ಇರಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು, ಅವಕಾಶ ಕಲ್ಪಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಯುವ ಸಂಸತ್‍ನ್ನು ಆಯೋಜಿಸಲು ಸರ್ಕಾರ ಅವಕಾಶ ಮಾಡಿದೆ. ವಿದ್ಯಾರ್ಥಿಗಳು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್ ಮಾತನಾಡಿ ಇಡೀ ವಿಶ್ವದಲ್ಲಿ ಮಾದರಿ ಪ್ರಜಾಪ್ರಭುತ್ವವನ್ನು ರಾಷ್ಟ್ರ ಹೊಂದಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಚಿದಾನಂದ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ಮಾಹಿತಿ ನೀಡಿ, ಸಭಾಧ್ಯಕ್ಷರ ಕಾರ್ಯ ನಿರ್ವಹಣೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆಗಳು, ಶಾಸನ ರಚನೆ ಹಾಗೂ ವಿಧೇಯಕಗಳ ಮಂಡನೆ ಮತ್ತಿತರ ವಿಚಾರಗಳ ಕುರಿತು ವಿವರಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ, ಸಂತ ಮೈಕಲರ ಶಾಲೆಯ ಪ್ರಾಂಶುಪಾಲರಾದ ಸುಮಂತ್ ಕೆ.ಎಸ್., ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಉದಯ್ ಕುಮಾರ್ ಇತರರು ಇದ್ದರು.