ಮಡಿಕೇರಿ ನ.19 NEWS DESK : ಕೊಡಗು ವಿಶ್ವವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜಿನ ದೈಹಿಕ ವಿಭಾಗದ ವತಿಯಿಂದ ಕೊಡಗು ವಿಶ್ವವಿದ್ಯಾಲಯ ಅಂತರ್ ಕಾಲೇಜು ಗುಡ್ಡ-ಗಾಡು ಓಟ ಸ್ಪರ್ಧೆ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ 19 ಕರ್ನಲ್ ರೆಜಿತ್ ಮುಕುಂದನ್, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಮತ್ತು ಮಾನಸಿಕವಾಗಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗುಡ್ಡ ಗಾಡು ಓಟ ಬಹಳ ಕಷ್ಟಕರವಾದ ಕ್ರೀಡೆ. ವಿದ್ಯಾರ್ಥಿಗಳು ದೈಹಿಕ ದೃಢತೆಯನ್ನು ಹೆಚ್ಚಿಸಕೊಳ್ಳಬೇಕು ಎಂದರು. ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ವಿಭಾಗದ ಪರಿವೀಕ್ಷಕ, ಅಂತರ್ ಕಾಲೇಜು ಗುಡ್ಡ-ಗಾಡು ನಿರ್ದೇಶಕ ರೋಡ್ರಿಗಸ್ ಮಾತನಾಡಿ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಸ್ಪೂರ್ತಿ ಮೆರೆಯುವುದು ದೊಡ್ಡ ಸಾಧನೆ. ಕ್ರೀಡಾಪಟುಗಳು ಮುಖ್ಯವಾಗಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಗುರಿ ಸಾಧನೆಗೆ ಪಣ ತೊಡಬೇಕು ಎಂದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೋ.ರಾಘವ ಬಿಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಖಿ ಪೂವಣ್ಣ, ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜಿನ ನಿರ್ದೇಶಕ ಆರ್.ಶಿವಕುಮಾರ್, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಕ್ರೀಡಾ ಸಂಯೋಜಕ ಅಲೋಕ್ ಬಿ.ಜೈ, ಸುಬೇದಾರ್ ಮೇಜರ್ ಪಿ.ಸಿಜು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಕ ಪಿ.ಸಿ.ರಮೇಶ್ ಹಾಜರಿದ್ದರು.
ಬಹುಮಾನ ವಿತರಣೆ : ಮಡಿಕೇರಿ ಜಿಎಫ್‌ಜಿಸಿ ಪ್ರಥಮ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ದ್ವಿತೀಯ, ವಿರಾಜಪೇಟೆ ಜಿಎಫ್‌ಜಿಸಿ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ವೈಯಕ್ತಿಕ ಬಹುಮಾನ :: ಯುವಕರ ವಿಭಾಗದಲ್ಲಿ ಜಿ ಎಫ್ ಜಿ ಸಿ ನಾಪೋಕ್ಲು ಗೌತಮ್ ಎಸ್. ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪಿ.ಸಿ.ಗೌತಮ್ ದ್ವಿತೀಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಪದವಿ ಕಾಲೇಜಿನ ದೀಪಕ್ ತೃತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಕ್ಷಿತಾ ಪ್ರಥಮ, ಸೋಮವಾರಪೇಟೆಯ ಸೇಂಟ್ ಜೋಸೆಫ್ ಪದವಿ ಕಾಲೇಜಿನ ಐಶ್ವರ್ಯ ದ್ವಿತೀಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿಲಿಶಾ ಜೋಜೋ ತೃತೀಯ ಬಹುಮಾನವನ್ನು ಪಡೆದುಕೊಂಡರು.