ಮಡಿಕೇರಿ ನ.19 NEWS DESK : ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ಸಂಸ್ಥೆಯ ವಿದ್ಯಾರ್ಥಿಗಳು ರಾಜಾಸೀಟ್ ಮಾರ್ಗವಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆ ವರೆಗೆ ಜಾಥಾ ನಡೆಸಿದರು. ಪ್ರತಿ ಜೀವಕಗಳನ್ನು ಸಾಮಾನ್ಯವಾಗಿ ಸೋಂಕು ನಿವಾರಣೆಗೆ ಬಳಸುತ್ತಾರೆ. ಆದರೆ ಇದರ ದುರ್ಬಳಕೆಯಿಂದ ಸೋಂಕು ಉಂಟುಮಾಡುವ ಸೂಕ್ಷ್ಮಜೀವಾಣುಗಳಿಗೆ ಈ ಔಷಧಿಗಳ ಮೇಲೆ ನಿರೋಧಕಶಕ್ತಿ ಬರುತ್ತದೆ. ಇದರಿಂದ ಔಷಧಿಯು ರೋಗ ನಿವಾರಣೆಯಲ್ಲಿ ವಿಫಲವಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿಜೀವಕಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆಯೂ ಉಪಯೋಗಿಸುವುದರಿಂದ ಈ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಅಸಮರ್ಪಕವಾಗಿ ಅಪೂರ್ಣವಾಗಿ ಈ ಔಷಧಿಗಳನ್ನು ತೆಗೆದುಕೊಳ್ಳುವುದು ಹಾಗೂ ಅನಗತ್ಯವಾಗಿ ಉಪಯೋಗಿಸುವುದರ ವಿರುದ್ಧ ಜಾಗೃತಿ ಮೂಡಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಡಾ.ಶಾಮಲ, ಡಾ.ಶ್ರೀದೇವಿ, ರವಿಕಿರಣ್, ಶ್ರುಶ್ರೂಷಕ ವಿಭಾಗದ ವಸಂತ, ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.